ಕೋವಿಡ್ ಕಾಲಘಟ್ಟದಲ್ಲಿ ದೇಶಕ್ಕೆ ಮಾದರಿಯಾದ ಮೇಳ: ಡಾ. ಎಂ.ಆರ್. ದಿನೇಶ್

ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ ’ ರಾಷ್ಟ್ರೀಯ ತೋಟಗಾರಿಕೆ ಮೇಳ ’ ರಾಜ್ಯ, ಹೊರರಾಜ್ಯಗಳ ರೈತರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಕೋವಿಡ್ ಕಾಲಘಟ್ಟದಲ್ಲಿ ಇದೊಂದು ದೇಶಕ್ಕೆ ’ ಮಾದರಿಯಾದ ಮೇಳ ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಹೇಳಿದ್ದಾರೆ.

ಮೇಳದ ಸಮಾರೋಪ ಸಮಾರಂಭದ ವೇಳೆ ಮಾತನಾಡಿದ ಅವರು, ಈ ಬಾರಿ ಮೇಳವನ್ನು ’ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಭಾರತಕ್ಕಾಗಿ ತೋಟಗಾರಿಕೆ’ ಎಂಬ ಶೀರ್ಷಿಕೆಯೊಂದಿಗೆ ಆರಂಭಿಸಿದೆವು. ಮೇಳವು ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಕಂಡಿತು. ಆನ್‌ಲೈನ್ ಮತ್ತು ಅಪ್‌ಲೈನ್ ಎರಡರಿಂದಲೂ ಸುಮಾರು ೧೬ ಲಕ್ಷಕ್ಕೂ ಹೆಚ್ಚು ಜನರು ಮೇಳವನ್ನು ವೀಕ್ಷಿಸಿದ್ದಾರೆ ಎನ್ನುವುದು ಮೇಳದ ಅಂಕಿ ಅಂಶಗಳು ತಿಳಿಸಿವೆ ಎಂದು ಹೇಳಿದರು.
ಐದು ದಿನಗಳ ಮೇಳದಲ್ಲಿ ಬೀಜೋತ್ಪಾದನೆ ಮಾರಾಟ, ಬೇರೆ ಬೇರೆ ಮೌಲ್ಯಧಾರಿತ ಉತ್ಪನ್ನಗಳ ಇವೆಲ್ಲವೂ ಸೇರಿದಂತೆ ಸುಮಾರು ೧೨ರಿಂದ ೧೫ ಲಕ್ಷ ಮೌಲ್ಯದಷ್ಟು ಮಾರಾಟ ಮಾಡಲಾಗಿದೆ. ವಿಶೇಷವಾಗಿ, ಹೊಸ ರೀತಿಯ ವಿಧಾನಗಳನ್ನು ಸಾವಯವ ಕೃಷಿಗೆ ಒತ್ತು ಕೊಡುವ ಉತ್ಪನ್ನಗಳನ್ನು ಮತ್ತು ಹೊಸ ತಳಿಗಳನ್ನು ಅದರಲ್ಲೂ ರೋಗನಿರೋಧಕ ತಳಿಗಳನ್ನು ಪ್ರದರ್ಶನ ಮಾಡಿದ್ದು ರೈತರ ಮೆಚ್ಚುಗೆಗೆ ಪಾತ್ರವಾಯಿತು ಎಂದು ಡಾ. ದಿನೇಶ್ ಹೇಳಿದರು.

೫ ದಿನ ೨೦ ಲಕ್ಷ ವಹಿವಾಟು
ತಳಿ, ತಂತ್ರಜ್ಞಾನಗಳ ತಾಕುಗಳ ಪೈಕಿ ಮೇಳದಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ತಾಕುಗಳಿದ್ದು, ಹೂವು-ಹಣ್ಣು-ತರಕಾರಿಗಳ ತಳಿಗಳು, ಯಂತ್ರೋಪಕರಣಗಳು, ಹೆಚ್ಚಿನ ಮೆಚ್ಚುಗೆಗೆ ವ್ಯಕ್ತವಾಯಿತು. ಸುಮಾರು ನೂರರಷ್ಟು ಮಳಿಗೆಗಳಿದ್ದು, ಅಂದಾಜು ೨೦ ಲಕ್ಷ ವಹಿವಾಟು ಆಗಿರಬಹುದು ಎಂದು ಅಂದಾಜಿಸಲಾಗಿದೆ.