ಪ್ಲುಟೊ ಒಂದು ಗ್ರಹವೆಂದು ಘೋಷಿಸಿ ಮತ್ತೆ ಚರ್ಚೆ ಹುಟ್ಟುಹಾಕಿದ ನಾಸಾ ಮುಖ್ಯಸ್ಥ

ನಾಸಾ:ಆ-29:(www.justkannada.in) ಸೌರಮಂಡಲದಲ್ಲಿ ಪ್ಲುಟೊ ಒಂದು ಗ್ರಹ ಎಂದು ನಾಸಾ ಮುಖ್ಯಸ್ಥ ಜಿಮ್ ಬ್ರಿಡೆನ್‌ಸ್ಟೈನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿಜ್ಞಾನಿಗಳಲ್ಲಿ ಪ್ಲುಟೊ ಒಂದು ಗ್ರಹ ಹೌದೋ ಅಲ್ಲವೋ ಎಂಬ ಚರ್ಚೆಗೆ ಮತ್ತೆ ನಾಂದಿಹಾಡಿದ್ದಾರೆ.

ಒಕ್ಲಹೋಮದಲ್ಲಿ ನಡೆದ ಮೊದಲ ರೊಬೊಟಿಕ್ಸ್ ಈವೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಜಿಮ್ ಬ್ರಿಡೆನ್‌ಸ್ಟೈನ್,ನನ್ನ ಪ್ರಕಾರ ಪ್ಲುಟೊ ಒಂದು ಗ್ರಹ. ನನ್ನ ಈ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ತಾವು ಅಧ್ಯಯನ ನಡೆಸಿದ್ದಾಗಿ ಕೂಡ ಹೇಳಿದ್ದಾರೆ.

ನಾಸಾದ ಈ ಹೇಳಿಕೆಯು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ (ಐಎಯು) ಅಧಿಕೃತ ನಿರ್ಧಾರಕ್ಕೆ ವಿರುದ್ಧವಾಗಿದೆ. ಕಾರಣ 2006 ರಲ್ಲಿ ಐಎಯು ಪ್ಲುಟೊವನ್ನು ಗ್ರಹಗಳ ಸ್ಥಾನದಿಂದ ಕೆಳಗಿಳಿಸಿ ಅದನ್ನು ಕುಬ್ಜ ಗ್ರಹ ಎಂದು ವರ್ಗೀಕರಿಸಿತ್ತು. “ಗ್ರಹ” ಪದವನ್ನು ಹೊಸದಾಗಿ ವ್ಯಾಖ್ಯಾನಿಸಿದ ಐಎಯು, ಪ್ಲುಟೊ ಒಂದು ಗ್ರಹವಾಗಿಲ್ಲ ಅದನ್ನು ಎರಿಸ್ ಮತ್ತು ಸೆರೆಸ್ ಗಳೊಂದಿಗೆ ಸೇರಿಸಿ ಕುಬ್ಜಗ್ರಹವೆಂದು ವಿಂಗಡಿಸಿತು.

ಈ ಮರುವಿಂಗಡಣೆಯ ನಂತರ ಪ್ಲುಟೊವನ್ನು ಕುಬ್ಜ ಗ್ರಹಗಳ ಪಟ್ಟಿಗೆ ಸೇರಿಸಿ, ಪ್ಲುಟೊ ಸೌರಮಂಡಲದ ಎರಡನೆ ಅತಿ ದೊಡ್ಡ ಕ್ಷುದ್ರಗ್ರಹ (ಏರಿಸ್ ನಂತರ) ಎಂದು ವಿಂಗಡಿಸಲಾಯಿತು. ಅಂದಿನಿಂದಲೂ ಪ್ಲುಟೊ ಬಗ್ಗೆ ಚರ್ಚೆಗಳು, ಮರು ವರ್ಗೀಕರಿಸುವ ವಾದ-ವಿವಾದ ಯಾವಾಗಲೂ ನಡೆಯುತ್ತಲೇ ಬರುತ್ತಿದೆ. ಈ ಬಾರಿ ನಾಸಾ ಮುಖ್ಯಸ್ಥರೇ ಮತ್ತೊಮ್ಮೆ ಈ ವಿಚಾರವನ್ನು ಎಳೆದು ತಂದಿದ್ದಾರೆ.

ಪ್ಲುಟೊ ಒಂದು ಗ್ರಹವೆಂದು ಘೋಷಿಸಿ ಮತ್ತೆ ಚರ್ಚೆ ಹುಟ್ಟುಹಾಕಿದ ನಾಸಾ ಮುಖ್ಯಸ್ಥ
NASA Chief Has Declared Pluto a Planet Once Again