ಸವಾಲಾದ ನಾರ್ಕೆ ಟೆರರಿಸಂ

ಬೆಂಗಳೂರು:ಜೂ-30: ಕಾಶ್ಮೀರ-ಪಂಜಾಬ್​ನಲ್ಲಿ ಯುವಸಮೂಹವನ್ನು ಬಲಿ ಪಡೆಯುತ್ತಿರುವ ‘ನಾರ್ಕೆ ಟೆರರಿಸಂ’ ಕರ್ನಾಟಕಕ್ಕೂ ವ್ಯಾಪಿಸಿರುವ ಆತಂಕ ಶುರುವಾಗಿರುವುದರಿಂದ ರಾಜ್ಯದಲ್ಲಿ ಮಾದಕ ವಸ್ತು ಮಾರುವವರು ಮತ್ತು ಸೇವಿಸುವವರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಗೆ 2 ತಿಂಗಳು ಗಡುವು ವಿಧಿಸಲಾಗಿದೆ

ಪೊಲೀಸ್ ಅಂದಾಜಿನ ಪ್ರಕಾರ ಕರ್ನಾಟಕದಲ್ಲೇ ವಾರ್ಷಿಕ 450ರಿಂದ 500 ಕೋಟಿ ರೂ. ಡ್ರಗ್ಸ್ ವಹಿವಾಟು ನಡೆಯುತ್ತದೆ. ಡ್ರಗ್ಸ್ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳುವ ಜತೆಗೆ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ, ಜಾಹೀರಾತು ಪ್ರದರ್ಶನ ಹಾಗೂ ಬೀದಿ ನಾಟಕಗಳ ಆಯೋಜನೆ ಮೂಲಕ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ಡಿಜಿಪಿ ನೀಲಮಣಿ ಎನ್. ರಾಜು ಆದೇಶಿಸಿದ್ದಾರೆ.

ಡ್ರಗ್ಸ್ ಜಾಲ ವಿರುದ್ಧ ನಡೆಸಿದ ದಾಳಿ, ಬಂಧಿತರ ಸಂಖ್ಯೆ, ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳ ವಿವರಗಳಿರುವ ವರದಿ ಸೆ.10ರ ಒಳಗೆ ಬೆಂಗಳೂರು ಕೇಂದ್ರ ಕಚೇರಿಗೆ ಕಳುಹಿಸಬೇಕು. ಪದೇಪದೆ ಸಿಕ್ಕಿಬೀಳುವ ಆರೋಪಿಗಳ ವಿರುದ್ಧ ಎನ್​ಡಿಪಿಎಸ್ ಕಾಯ್ದೆ 1985, ಕೋಕಾ ಕಾಯ್ದೆ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಡಿಜಿಪಿ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಐಜಿಪಿಗಳಿಗೆ ಜವಾಬ್ದಾರಿ: ಮಾದಕ ವಸ್ತು ವಿರುದ್ಧದ ಅಭಿಯಾನವನ್ನು ವೈಯಕ್ತಿಕವಾಗಿ ಗಮನಹರಿಸುವಂತೆ ಆಯಾ ರೇಂಜ್ ಐಜಿಪಿಗಳಿಗೆ ಡಿಜಿಪಿ ಸೂಚಿಸಿದ್ದಾರೆ. ಕೆಳಹಂತದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅಭಿಯಾನ ನಡೆಸುವಂತೆ ನಿರ್ದೇಶಿಸಿದ್ದಾರೆ.

ನೈಋತ್ಯ ಏಷ್ಯಾದಿಂದ ಹೆರಾಯಿನ್!

ಹೆರಾಯಿನ್ ಡ್ರಗ್ಸ್ ನೈಋತ್ಯ ಏಷ್ಯಾದಿಂದ ಸಮುದ್ರ ಮಾರ್ಗವಾಗಿ ಭಾರತಕ್ಕೆ, ಬಳಿಕ ಭಾರತದಿಂದ ಮತ್ತೆ ಬೇರೆಬೇರೆ ದೇಶಗಳಿಗೆ ಕಳ್ಳ ಸಾಗಣೆಯಾಗುತ್ತದೆ. ಆಶಿಷ್ ಮಾದಕ ಪದಾರ್ಥ ನೇಪಾಳದಿಂದ ಭಾರತಕ್ಕೆ ಬರುತ್ತದೆ. ಪ್ರತಿ ವಹಿವಾಟು ಕೋಡ್ ವರ್ಡ್​ಗಳಲ್ಲೇ ನಡೆಯುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ಡಿಜಿಪಿ ಆದೇಶದ ಮುಖ್ಯಾಂಶಗಳು

* ಡ್ರಗ್ಸ್ ಉತ್ಪಾದನೆ, ಪ್ರದೇಶ, ಸರಬರಾಜು ವ್ಯವಸ್ಥೆ, ಪೂರೈಕೆದಾರರು ಯಾರೆಂಬ ವಿವರ ಸಂಗ್ರಹ.
* ಡ್ರಗ್ಸ್ ಸೇವಿಸುವವರು, ಆರ್ಥಿಕ ಮೂಲ, ಮಾದಕ ವಸ್ತು ಮಾದರಿಗಳ ಬಗ್ಗೆ ನಿಗಾ ವಹಿಸುವುದು.
* ರಾಜ್ಯದ ಎಲ್ಲ ಸೂಕ್ಷ್ಮ ಗಡಿ ಭಾಗಗಳು ಹಾಗೂ ಹೊರ ರಾಜ್ಯಗಳ ಚೆಕ್​ಪೋಸ್ಟ್​ಗಳಲ್ಲಿ ಪರಿಶೀಲನೆ.
* ಮಾದಕ ವಸ್ತು ನಿಯಂತ್ರಣ ಇಲಾಖೆ ಜತೆ ಸಮನ್ವಯ ದೊಂದಿಗೆ ಔಷಧ ಮಳಿಗೆಗಳ ಮೇಲೆ ನಿಗಾ.
* ಖಾಸಗಿ/ಸರ್ಕಾರಿ ವ್ಯಸನಮುಕ್ತಿ ಕೇಂದ್ರಗಳಲ್ಲಿ ದಾಖಲಾಗುವ ಡ್ರಗ್ಸ್ ವ್ಯಸನಿಗಳ ವಿವರ ಸಂಗ್ರಹ.
* ಯಾರು ವ್ಯಸನಿಗಳಾಗುತ್ತಿದ್ದಾರೆ ಮತ್ತು ಯಾವ ಡ್ರಗ್ಸ್ ಸೇವಿಸುತ್ತಾರೆ ಎಂಬುದರ ಮೌಲ್ಯಮಾಪನ.
* ಜೈಲಿನಿಂದ ಬಿಡುಗಡೆಯಾದವರು ಮತ್ತು ಹಳೇ ಆರೋಪಿಗಳ ಮೇಲೆ ನಿಗಾವಹಿಸಿ ಹಠಾತ್ ದಾಳಿ.

ಜಾಗೃತಿ ಮೂಡಿಸುವುದು ಹೇಗೆ?

* ಆಯಾ ಠಾಣಾ/ವಿಭಾಗ ಮಟ್ಟದಲ್ಲಿ ಕೆಳಹಂತದ ಸಿಬ್ಬಂದಿ ಟ್ರೖೆನಿಂಗ್​ಗೆ ವಿಶೇಷ ಕಾರ್ಯಾಗಾರ.
* ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜನೆ.
* ಶಾಲಾ-ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ ಮತ್ತು ಸ್ಟುಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ.
* ಕಿರುಚಿತ್ರ ನಿರ್ವಣ, ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಗೃತಿ ಕಾರ್ಯಕ್ರಮ ಪ್ರಸಾರ.
ಕೃಪೆ:ವಿಜಯವಾಣಿ

ಸವಾಲಾದ ನಾರ್ಕೆ ಟೆರರಿಸಂ
narco-terrorism-spreading-in-karnataka