ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಮುಸುಕಿನ ಗುದ್ದಾಟ: ಸಂಸದ ಪ್ರತಾಪ್‌ಸಿಂಹಗೆ ಟಾಂಗ್‌ ಕೊಟ್ಟ ಸಚಿವ ಸಾ.ರಾ.ಮಹೇಶ್‌…

ಮೈಸೂರು,ಮೇ,28,2019(www.justkannada.in): ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸಾ.ರಾ ಮಹೇಶ್  ನಡುವೆ ಮುಸುಕಿನ ಗುದ್ದಾಟ ನಡೆದಿದೆ.

ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆಯಿಂದ ಕಾಮಾಗಾರಿ ಹಿನ್ನೆಲೆ, ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸಾರಾ ಮಹೇಶ್  ಪ್ರತ್ಯೇಕವಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ಕೆಲಸ ನಾವು ಮಾಡುತ್ತೇವೆ ಎಂದ ಸಂಸದ ಪ್ರತಾಪ್ ಸಿಂಹ ಹೇಳಿದರೇ, ಪಾರಂಪರಿಕತೆಗೆ ಧಕ್ಕೆ ತರಬೇಡಿ ಎಂದ ಸಚಿವ ಸಾರಾ ಮಹೇಶ್ ಟಾಂಗ್ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಹಾಗೂ ರೈಲ್ವೆ ಇಲಾಖೆ ಡಿಆರ್‌ಎಂ ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಆಗಮಿಸಿದ ಸಚಿವ ಸಾ. ರಾ ಮಹೇಶ್ ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಪಾರಂಪರಿಕ ಕಟ್ಟಡದ ಪರಿವೀಕ್ಷಣೆ ಮಾಡಿದರು.

ಬಳಿಕ ಮಾತನಾಡಿದ ಸಚಿವ ಸಾ.ರಾ ಮಹೇಶ್, ಈ ಕಾಮಾಗಾರಿಯಲ್ಲಿ ರಾಜ್ಯದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಕಾನೂನು ಪಾಲನೆಯಾಗಿಲ್ಲ. ಆ ಪ್ರಕಾರ ನಾವು ನಗರಪಾಲಿಕೆ ಹಾಗೂ ಪುರಾತತ್ವ ಇಲಾಖೆ ಮೂಲಕ ಕ್ರಮಕೈಗೊಳ್ಳಬಹುದು. ಆದ್ರೆ ನಾವು ರೈಲ್ವೆ ಇಲಾಖೆಯ ವಿವರಣೆ ಕೇಳಿದ್ದೇವೆ. ಅವರು ಕೊಡುವ ವಿವರಣೆ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹಗೆ ಸಲಹೆ ನೀಡಿದ ಸಚಿವ ಸಾರಾ ಮಹೇಶ್, ಸಂಸದರು ಸ್ವಲ್ಪ ಕಾನೂನು ಓದಿಕೊಂಡು ಬರಲಿ. ಅಭಿವೃದ್ದಿ ಕಾಮಗಾರಿಗೆ ನಮ್ಮ ತರಕಾರು ಇಲ್ಲ. ಆದ್ರೆ ಮೈಸೂರಿನಲ್ಲಿ ಕೇಂದ್ರ ಸರ್ಕಾರ ಅಂತ ಹೇಳಿ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ತಂದರೆ ಏನು ಅರ್ಥ. ಇವರು ಮಾಡಿದ್ದನ್ನ ನೋಡಿಕೊಳ್ಳುತ್ತಾ ಸುಮ್ಮನಿದ್ದರೆ ಮುಂದೊಂದು ದಿನ ಪಾರಂಪರಿಕತೇಯೆ ಇರೋಲ್ಲ. ಎಂದು ಟಾಂಗ್ ನೀಡಿದರು.

ಕೇಂದ್ರ ಸರ್ಕಾರದಿಂದ ಮೈಸೂರು ರೈಲ್ವೆ ನಿಲ್ದಾಣಕ್ಕೆ 16.5 ಕೋಟಿ ಹಣ ಬಿಡುಗಡೆಯಾಗಿರುವ  ಹಿನ್ನೆಲೆ ಮೈಸೂರು ರೈಲ್ವೆ ನಿಲ್ದಾಣಕ್ಕೆ  ಸಂಸದ ಪ್ರತಾಪ್ ಸಿಂಹ ಪ್ರತ್ಯೇಕವಾಗಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು,

ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ಮೋದಿ ಸರ್ಕಾರ ರೈಲ್ವೆ ನಿಲ್ದಾಣಗಳನ್ನ ಅಭಿವೃದ್ಧಿ ಮಾಡುತ್ತಿದೆ. ಅದರಲ್ಲಿ ಮೈಸೂರು ನಿಲ್ದಾಣವು ಸಹ ಒಂದು. ಹೀಗಾಗಿ ಇಲ್ಲಿನ ಪಾರಂಪರಿಕತೆಗೆ ಧಕ್ಕೆಯಾಗದಂತೆ ಕೆಲಸ ಆಗುತ್ತಿದೆ. ಕೆಲ ಜನರು ಸುಮ್ಮನೆ ಪಾರಂಪರಿಕತೆಗೆ ಧಕ್ಕೆ ಅಂತ ಹೇಳಿದ್ದಾರೆ. ಮೈಸೂರಿನ ರಾಜಕಾರಣಿಗಳ ಗೆಸ್ಟ್‌  ಹೌಸ್ ಜಲದರ್ಶಿನಿ ಪುನರ್ನಿರ್ಮಾಣ ಮಾಡುವಾಗ ಇವರಿಗೆ ಪಾರಂಪರಿಕತೆ ನೆನಪಾಗಲಿಲ್ವಾ. ಜನರಿಗೊಂದು.‌ರಾಜಕಾರಣಿಗಳಿಗೊಂದು ನ್ಯಾಯಾನ ಎಂದು ಪ್ರಶ್ನಿಸಿದರು. ಇದು ಕೇಂದ್ರದ ಸರ್ಕಾರ ಯೋಜನೆ. ಅಭಿವೃದ್ಧಿಗೆ ಅಡ್ಡಿಪಡಿಸದೆ ಸಹಕಾರ ನೀಡಲಿ ಎಂದು ಪ್ರತಾಪ್ ಸಿಂಹ ಹೇಳಿದರು.

Key words: #Mysorerailwaystation #development #work: