ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಮೈಸೂರಿನ ಯುವಕನ ಸಾಕ್ಷ್ಯಚಿತ್ರ ಆಯ್ಕೆ.

ಮೈಸೂರು,ಜುಲೈ,8,2022(www.justkannada.in):  ನಗರದ ಯುವಕ ಎಂ.ವಿ.ವೆಂಕಟರಾಘವ ಅವರು ನಿರ್ಮಿಸಿ, ನಿರ್ದೇಶಿಸಿರುವ ‘ ದಿ ಗೋಲ್ಡನ್ ಬಗ್: ಫ್ರುಟ್ ಫುಲ್ ಸಾಗ ಆಫ್ ದಿ ಫ್ರುಟ್ ಪ್ಲೈ’ (The Goldenbug: Fruitful Saga of the Fruitfly) ಸಾಕ್ಷ್ಯಚಿತ್ರವು ರಾಷ್ಟ್ರ ಮಟ್ಟದ ವಿಜ್ಞಾನ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.

ಕೇಂದ್ರ ಸರ್ಕಾರದ ವಿಜ್ಞಾನ ಸಚಿವಾಲಯದಡಿಯಲ್ಲಿರುವ  ವಿಜ್ಞಾನ ಪ್ರಸಾರ್  ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಿರುವ 11ನೇ ನ್ಯಾಷನಲ್ ಸೈನ್ಸ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕಿರಿಯ ಸಂಶೋಧನಾಧಿಕಾರಿ ಆರನ್ ಮೆನೆಜಸ್ ಹಾಗೂ ಜಿನಿಟಿಕ್ಸ್ ಮತ್ತು ಜಿನೋಮಿಕ್ಸ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್. ಬಿ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ  ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ಜಿನಿಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಸಂಶೋಧಕ ಡಾ.ಸಿ.ಆರ್. ಕೌಶಿಕ್ ಪೊನ್ನಣ್ಣ ಅವರ ಸ್ಕ್ರಿಪ್ಟ್ ಹಾಗೂ ಶಿವಮೂರ್ತಿ ನಂಚಂದ್ ಅವರ ಗ್ರಾಫಿಕ್ಸ್ ನಲ್ಲಿ ಸಾಕ್ಷ್ಯಚಿತ್ರ ಮೂಡಿ ಬಂದಿದೆ.

‘ ಡ್ರೊಸೊಫಿಲಾ ಎಂಬ ಸಣ್ಣ ಕೀಟದ ಆಧಾರಿತ ಸಾಕ್ಷ್ಯಚಿತ್ರವಾಗಿದ್ದು, ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಷಯಗಳನ್ನು ಹೇಳುವಂತಹ ವಸ್ತುನಿಷ್ಠ ಚಿತ್ರವಾಗಿದೆ. ಡ್ರೊಸೊಫಿಲಾವನ್ನು ಬಳಸಿಕೊಂಡು ಇದುವರೆಗೆ ವೈಜ್ಞಾನಿಕವಾಗಿ ಮಾಡಿರುವ ಪ್ರಯೋಗಗಳಿಗೆ ಆರು ನೊಬೆಲ್ ಪ್ರಶಸ್ತಿಗಳು ಲಭ್ಯಸಿವೆ. ಮಾನವನ ದೇಹ ಮತ್ತು ಡ್ರೊಸೊಫಿಲ್ ದೇಹಕ್ಕೂ ಶೇ.60 ರಷ್ಟು ಸಾಮ್ಯತೆ ಇದೆ. ಹೀಗಾಗಿ ನೋಣ ಮಾದರಿ ಇರುವ ಈ ಕೀಟದ ಬಗ್ಗೆ ಮತ್ತು ಇದರ ಮೇಲೆ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ವಿಜ್ಞಾನ ವಿದ್ಯಾರ್ಥಿಗಳಲ್ಲದೆ ಜನ ಸಾಮಾನ್ಯರು ತಿಳಿದುಕೊಳ್ಳಲಿ ಎಂದು ಈ ಈ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ ಎಂದು ನಿರ್ದೇಶಕ ಎಂ.ವಿ.ವೆಂಕಟರಾಘವ ತಿಳಿಸಿದರು.

ಮೊದಲಬಾರಿಗೆ ವಿಜ್ಞಾನ ಎಂಬ ಪ್ರಪಂಚಕ್ಕೆ ಡ್ರೊಸೊಫಿಲಾ ಎಂಬ ಕೀಟವನ್ನು ಪರಿಚಯಿಸಿದ್ದು ಟಿ. ಎಚ್. ಮಾರ್ಗನ್ ಎಂಬ ವಿಜ್ಞಾನಿ. ಇವರು ತಮ್ಮ ಪ್ರಯೋಗವಾದ ಜೀನ್ ಮತ್ತು ಕ್ರೋಮೊಜೊಮ್ ಎಂಬ ವಿಶಿಷ್ಟ ವಿಷಯಾಧಾರಿತ ಪ್ರಯೋಗಕ್ಕೆ ಈ ಕೀಟವನ್ನು ಬಳಸಿಕೊಂಡರು. ಮೊದಲಿಗೆ ಕ್ಲಾಸಿಕಲ್ ಜೆನೆಟಿಕ್ಸ್ ಇಂದ ಪ್ರಾರಂಭವಾದ ಇದರ ಪ್ರಯೋಗವು ನಂತರ ಡೆವಲಪ್ಮೆಂಟ್ ಬಯೋಲಜಿವರೆಗೂ ವಿಸ್ತಾರವಾಯಿತು.

ನಂತರ ಜಿನೋಮ್ ಹಾಗೂ ಹ್ಯೂಮನ್ ಹೋಮಲಜಿ ಪ್ರಯೋಗಕ್ಕೆ ಬಳಸಲಾಯಿತು. ಇದರ ನಂತರ ತಿಳಿದ ಸತ್ಯ ವೆಂದರೆ ಮನುಷ್ಯನಿಗೆ ಬರುವ ಶೇಕಡಾ 60 ರಷ್ಟು ಖಾಯಿಲೆಗಳು ಇದಕ್ಕೂ ಬರುತ್ತವೆ ಎಂಬ ಅಂಶವು ಖಾತಾರಿಯಾಯಿತು. ನಂತರ ಈ ಕೀಟವನ್ನು ಬಳಸಿಕೊಂಡು ಮನುಷ್ಯನಿಗೆ ಬರುವ ಖಾಯಿಲೆಗಳಿಗೆ ಔಷಧಿಗಳನ್ನು ತಯಾರಿಸಿ, ಮೊದಲಿಗೆ ಆ ಔಷಧಿಯನ್ನು ಡ್ರೊಸೊಫಿಲಾ ಮೇಲೆ ಪ್ರಯೋಗ ಮಾಡಿ ಅದು ಚೇತರಿಕೆ ಕಂಡರೆ ಮಾತ್ರ, ಆ ಔಷಧಿಯನ್ನು ಮನುಷ್ಯರಿಗೆ ನೀಡಲಾಯಿತು. ಹೀಗೆ ಹಲವಾರು ಖಾಯಿಲೆಗಳು ಹಾಗೂ ಅಧ್ಯಯನಗಳಾದ, ಕ್ಯಾನ್ಸರ್, ನ್ಯೂರೋ ಬಯೋಲಾಜಿ, ಡ್ರಗ್ ಡಿಸ್ಕವರಿ, ಎವ್ಯೂಲ್ಯೂಷನರಿ  ಬಯೋಲಾಜಿಗಳಿಗೆ ಈ ಕೀಟವನ್ನು ಬಳಸಿಕೊಳ್ಳಲಾಯಿತು. ಅಲ್ಲದೆ ಸ್ಪೇಸ್ ರಿಸರ್ಚ್ ನಲ್ಲೂ ಕೂಡ ವಿಜ್ಞಾನಿಗಳು ಈ ಕೀಟವನ್ನು ಬಳಸಿಕೊಂಡು ಪ್ರಯೋಗ ನಡೆಸಿದ್ದು, ಅದು ಯಶಸ್ವಿಯಾಗಿದೆ. ಪ್ರಸ್ತುತದಲ್ಲಿ ಡ್ರೊಸೊಫಿಲಾ ಎಂಬುದು ದೊಡ್ಡ ಅಂಶವಾಗಿದ್ದು, ಪ್ರಪಂಚದಾದ್ಯಂತ ಇದರ ಪ್ರಯೋಗ ಹಾಗೂ ಅಧ್ಯಯನಗಳು ನಡೆಯುತ್ತಲೇ ಇದೆ. ಅಲ್ಲದೆ ಪಠ್ಯಕ್ರಮದಲ್ಲೂ ಸಹ ಇದರ ಬಗೆಗಿನ ಅಧ್ಯಾಯಗಳನ್ನು ಅಳವಡಿಸಲಾಗಿದೆ. ಇದಿಷ್ಟು ಅಂಶಗಳನ್ನು ಒಳಗೊಂಡತಹ ಸಾಕ್ಷ್ಯಚಿತ್ರವು ಇದಾಗಿದ್ದು, ಬಹಳ ಸೊಗಸಾಗಿದೆ ಹಾಗೂ ವಸ್ತುನಿಷ್ಠವಾಗಿದೆ ಎಂದು ಅವರು ವಿವರಿಸಿದರು.

ನಮ್ಮ ಶ್ರಮ  ಮತ್ತು ಸೃಜನಾತ್ಮಕತೆಗೆ ತಕ್ಕ ಫಲ ದೊರೆತಿದೆ. ಮೊದಲ ಬಾರಿಗೆ ನಮ್ಮ ಸಾಕ್ಷ್ಯಚಿತ್ರ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವುದು ಖುಷಿ ತಂದಿದೆ. ಇನ್ನಷ್ಟು ಸಾಕ್ಷ್ಯಚಿತ್ರ ನಿರ್ಮಿಸಲು ಸ್ಫೂರ್ತಿ ತುಂಬಿದೆ ಎಂದು ಎಂ.ವಿ.ವೆಂಕಟರಾಘವ ತಿಳಿಸಿದ್ದಾರೆ.

Key words: Mysore –youth- documentary -selected -National –Science- Film -Festival.