ಮೈಸೂರು ವಿವಿ ದತ್ತು ಪಡೆದ ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳು ಸಿದ್ಧ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಚಾಮರಾಜನಗರ,ಮಾರ್ಚ್,8,2021(www.justkannada.in)  : ಜಿಲ್ಲೆಯ ಹನೂರು ತಾಲೂಕಿನ ಆರು ಗ್ರಾಮಗಳನ್ನು ದತ್ತು ಪಡೆದಿದ್ದು, ಈ ಗ್ರಾಮಗಳ ಹಾಗೂ ಸೋಲಿಗ ಬುಡಕಟ್ಟು ಜನರ ಸರ್ವತೋಮುಖಕ್ಕೆ 2 ವರ್ಷಗಳಿಂದ ಮೈಸೂರು ವಿವಿ ಉನ್ನತ ಭಾರತ ಅಭಿಯಾನ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಹಳ್ಳಿಗಳಲ್ಲಿ ಸಮೀಕ್ಷೆ ಕೈಗೊಂಡು, ಗ್ರಾಮ ಅಭಿವೃದ್ದಿ ಯೋಜನೆಗಳನ್ನು ತಯಾರಿಸಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

jk

ಮೈಸೂರು ವಿಶ್ವವಿದ್ಯಾನಿಲಯ ಉನ್ನತ ಭಾರತ ಅಭಿಯಾನ ಯೋಜನಾ ಕೇಂದ್ರ,ಚಾಮರಾಜನಗರ ಜಿಲ್ಲಾಡಳಿತ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಸೋಲಿಗ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಚಾಮರಾಜನಗರದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೀವನೋಪಾಯ ತರಬೇತಿ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.

ಇದುವರೆವಿಗೂ ಮೈಸುರು ವಿವಿ ಉನ್ನತ ಭಾರತ ಅಭಿಯಾನ ಯೋಜನಾ ಕೇಂದ್ರವು ಹಳ್ಳಿಗಳಲ್ಲಿ ನಡೆಸಿರುವ ಅಧ್ಯಯನ ಮತ್ತು ವಿಶ್ಲೇಷಣೆಯ ಪ್ರಕಾರ ಈ ಹಳ್ಳಿಗಳಿಂದ ಸ್ನಾತಕೋತ್ತರ ಪದವಿಗೆ ಬರುವ ಸೋಲಿಗ ಬುಡಕಟ್ಟು ಜನಾಂಗದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಗೆ ಮೈಸೂರು ವಿವಿ ಉಚಿತವಾಗಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಿದೆ ಎಂದರು.

ಉನ್ನತ ಭಾರತ ಅಭಿಯಾನ ಯೋಜನೆ ಮತ್ತು ಸ್ಮಾರ್ಟ್ ವಿಲೇಜ್ ಯೋಜನೆಯಡಿ ವಿಶೇಷ ಮೀಸಲಾತಿ ಅವಕಾಶವನ್ನು ನೀಡಲಾಗಿದೆ. ಈ ಬಾರಿ ವಿಜ್ಞಾನ ವಿಭಾಗಕ್ಕೆ ಒಬ್ಬ ವಿದ್ಯಾರ್ಥಿ ಮತ್ತು ಸಮಾಜಕಾರ್ಯ ಅಧ್ಯಯನ ವಿಭಾಗಕ್ಕೆ ಒಬ್ಬ ವಿದ್ಯಾರ್ಥಿನಿಯು ಪ್ರವೇಶಾತಿಯನ್ನು ಪಡೆದಿರುತ್ತಾರೆ. ದತ್ತು ಗ್ರಾಮಗಳಲ್ಲಿ ಬೆಳೆಯುವ ಆಹಾರ ಉತ್ಪನ್ನಗಳಿಗೆ ಹಾಗೂ ಅರಣ್ಯ ಕಿರುಧಾನ್ಯಗಳಿಗೆ  ನೇರ ಮಾರಾಟ ಮಾಡಲು ನಮ್ಮ ವಿವಿಯ ಒಂದು ಮಾರಾಟ ಮಳಿಗೆಯನ್ನು ಸ್ಥಾಪನೆ ಮಾಡಲು ಜ್ಞಾನ ಪಾಲುದಾರ ಸಂಸ್ಥೆಯಾದ ಸೋಲಿಗ ಅಭಿವೃದ್ಧಿ ಕೇಂದ್ರ ಹನೂರು ಇವರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Mysore VV,Adopted,villages,development,Projects,Ready,Chancellor,Prof.G.Hemant Kumar

ದತ್ತು ಪಡೆದ ಆರು ಗ್ರಾಮಗಳ ಯಾವುದಾದರೂ ಎರಡು ಸ್ಥಳಗಳಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸಲು ಕಾಮನ್ ಸರ್ವಿಸ್ ಸೆಂಟರ್ ಗಳನ್ನು ಪ್ರಾರಂಭ ಮಾಡಲಾಗುವುದು. ಈ ದತ್ತು ಗ್ರಾಮಗಲ್ಲಿ ಮಹಿಳಾ ಆರ್ಥಿಕ ಸಬಲಿಕರಣಕ್ಕಾಗಿ ಹೋಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಹೊಲಿಗೆ ಯಂತ್ರವನ್ನು ವಿಶ್ವವದ್ಯಾನಿಲಯವು ಉಚಿತವಾಗಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಸೋಲಿಗ ಅಭಿವೃದ್ಧಿ ಸಂಘ, ಹನೂರು ಮತ್ತು ಗ್ರಾಪಂಗಳ ಸಹಕಾರದೊಂದಿಗೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಒಂದು ಕುಟುಂಬ, ಸಮುದಾಯ ಮತ್ತು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯ ಪಾತ್ರ ಅತಿಮುಖ್ಯಘಿ. ನಾಯಕತ್ವದಲಿ ಮಹಿಳೆ : ಕೋವಿಡ್-19 ಸಮಯದಲ್ಲಿ ಸಮಾನ ಮತ್ತು ಉತ್ತಮ ಭವಿಷ್ಯ ಸಾಧನೆ ಎಂಬುದು ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯವಾಗಿದೆ. ಕೋವಿಡ್-19ರ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಪುರುಷರಲ್ಲದೇ ಮಹಿಳೆಯರೂ ಸಹ ಮುಂದಾಳತ್ವವನ್ನು ವಹಿಸಿದ್ದಾರೆ ಎಂದು ಸ್ಮರಿಸಿದರು.

ಕರೊನಾ ವಾರಿಯರ್ಸ್‌ಗಳಾಗಿ ಮಹಿಳಾ ವೈದ್ಯರು, ದಾದಿಯರು, ಯುವತಿಯರು ಮತ್ತು ಸಮುದಾಯ ಸಂಘಟಕರು, ಮಹಿಳಾ ಸಂಘಟನೆಗಳು, ಸಕ್ರೀಯವಾಗಿ ಮತ್ತು ಯಶಸ್ವಿಯಾಗಿ ಕಾರ‌್ಯನಿರ್ವಹಿಸಿದ್ದಾರೆ. ಮಹಿಳೆಯರ ಸ್ಥಿತಿಗಳನ್ನು ನೋಡಿದಾಗ ಹಾಗೂ ಮಾನವ ಅಭಿವೃದ್ಧಿ ವರದಿಯ ಅಂಶಗಳನ್ನು ಗಮನಿಸಿದಾಗ ಪ್ರತಿ ವಿಷಯಕ್ಕೂ ಮಹಿಳೆ ತನ್ನ ಹೋರಾಟದ ಆಯ್ಕೆಯನ್ನು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಬಡತನ, ಹಸಿವು, ಉದ್ಯೋಗ, ಅಭಿವೃದ್ಧಿ, ಬಜೆಟ್ ಹೀಗೆ ಹಲವಾರು ಪ್ರಮುಖ ವಿಷಯಗಳಲ್ಲಿ ಮಹಿಳೆಯರನ್ನು ಸಶಕ್ತಗೊಳಿಸಿ ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಕರೆದೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಆದಿವಾಸಿ ಮಹಿಳೆಯರಿಗೆ ಸೂಕ್ತ ತರಬೇತಿ 
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮಾತನಾಡಿ, ಎಲ್ಲಾ ಕೌಶಲಗಳನ್ನು ನಿರ್ವಹಿಸಲು ಸಾಮರ್ಥ್ಯಹೊಂದಿರುವ ಆದಿವಾಸಿ ಮಹಿಳೆಯರಿಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಅವರಿಗಾಗಿಯೇ ರೈತ ಉತ್ಪಾದಕ ಸಂಘ ರಚಿಸುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ನೆರವಾಗಬೇಕಿದೆ ಎಂದರು.

ಜಿಲ್ಲೆಯ ಸೋಲಿಗರು ಕಾಫಿ ಬೆಳೆಯುವ ಮೂಲಕ ಇಡೀ ರಾಷ್ಟ್ರವನ್ನೇ ಗಮನಸೆಳೆಯುವಲ್ಲಿ ಮುಂದಾಗಿದ್ದಾರೆ. ಇತರೆ ಬೆಳೆಗಳನ್ನು ಬೆಳೆಯುತ್ತಿರುವ ಆದಿವಾಸಿಗಳು ಉತ್ಪನ್ನಗಳ ಮೌಲ್ಯವರ್ಧನೆ ಚಟುವಟಿಕೆಗಳಿಗೂ ತೊಡಗಿಕೊಂಡರೆ ಸುಸ್ಥಿರ ಅಭಿವೃದ್ದಿ ಸಾಧ್ಯವಾಗಲಿದೆ. ಹೀಗಾಗಿ, ಆದಿವಾಸಿ ಮಹಿಳೆಯರನ್ನೇ ಒಳಗೊಂಡ ರೈತ ಉತ್ಪಾದಕ ಸಂಘ ರಚನೆಯಾದರೆ ಇನ್ನಷ್ಟು ಆರ್ಥಿಕ ಪ್ರಗತಿಗೆ ಸಾಧ್ಯವಾಗಲಿದೆ ಎಂದು ಹೇಳಿದರು.

ಆದಿವಾಸಿ ಹೆಣ್ಣು ಮಕ್ಕಳು ಕರಕುಶಲ ಮತ್ತು ಕಸೂತಿ ಕಲೆಗಳಲ್ಲಿ ಪರಿಣತಿ ಹೊಂದುವ ಸಾಮಥ್ರ್ಯ ಹೊಂದಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಜವಳಿ ಉದ್ಯಮದಲ್ಲಿ ಕಸೂತಿಗೆ ಹೆಚ್ಚಿನ ಬೇಡಿಕೆ ಮತ್ತು ಅವಕಾಶಗಳಿವೆ. ಶ್ರಮ ಜೀವಿಗಳಾಗಿರುವ ಆದಿವಾಸಿ ಮಹಿಳೆಯರಿಗೆ ಆಧುನಿಕ ಕಸೂತಿ ಕೌಶಲ ತರಬೇತಿ ನೀಡಿ ಅವರಿಗೆ ಉದ್ಯಮದ ಸಂಪರ್ಕ ಕಲ್ಪಿಸಿದರೆ ಆರ್ಥಿಕವಾಗಿ ಸಬಲರನ್ನಾಗಿಸಬಹುದು. ಈಗಾಗಲೇ ಕಸೂತಿ ಕೌಶಲ ಸಂಬಂಧ ಯೋಜನಾ ವರದಿ ಲಭ್ಯವಿದ್ದು, ಇದರ ಅನುಷ್ಠಾನ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

Mysore VV,Adopted,villages,development,Projects,Ready,Chancellor,Prof.G.Hemant Kumar

ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಚೈತ್ರಾನಾರಾಯಣ್, ಕೃಷಿ ಮಹಾವಿದ್ಯಾಲಯ ವಿಶೇಷ ಅಧಿಕಾರಿ ಡಾ.ಎಂ.ಪಿ.ರಾಜಣ್ಣ, ಹಿರಿಯ ವಿಜ್ಞಾನಿ ಡಾ.ಚಂದ್ರಕಲಾ ಹಣಗಿ, ಸೋಲಿಗ ಅಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಮುನಿಯಾದಮ್ಮ, ಉನ್ನತ ಭಾರತ ಅಭಿಯಾನ ಯೋಜನಾ ಕೇಂದ್ರ ಸಂಯೋಜಕ ಡಾ.ಎಚ್.ಪಿ.ಜ್ಯೋತಿ ಇತರರು ಉಪಸ್ಥಿತರಿದ್ದರು.

key words : Mysore VV-Adopted-villages-development-Projects-Ready-Chancellor-Prof.G.Hemant Kumar