ಪಠ್ಯದ ಜೊತೆ ಸಂವಹನ ಕೌಶಲ್ಯವೂ ಅವಶ್ಯಕ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,8,2022(www.justkannada.in):  ವಿಜ್ಞಾನದಲ್ಲಿ ಸಂವಹನ ನಡೆಸಬೇಕೆಂದರೆ ಅದಕ್ಕೆ ಪ್ರತ್ಯೇಕ ಕೌಶಲ್ಯದ ಅಗತ್ಯತೆ ಇದೆ. ಅದಕ್ಕೆ ಇಂತಹ ಕಾರ್ಯಾಗಾರಗಳು ಸಹಕಾರಿಗಲಿವೆ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಮಾನಸ ಹಾಗೂ ಕುತೂಹಲಿ ಸೈನ್ಸ್ ಕಮ್ಯುನಿಕೇಶನ್ ಫಾರ್ ಪಾಪ್ಯೂಲರೈಜೇಶನ್ ಮತ್ತು ಎಕ್ಸ್ಟೆನ್ಷನ್ ಸಹಯೋಗದಲ್ಲಿ ಮಾಧ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಮಾಧ್ಯಮ ವಿದ್ಯಾರ್ಥಿಗಳಿಗೆ ವಿಜ್ಞಾನ ಸಂವಹನ’ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ತಂತ್ರಜ್ಞಾನ ಸಂವಹನ ಕೌಶಲ್ಯವೂ ಅವಶ್ಯಕ. ಅಲ್ಲದೇ ವಿಜ್ಞಾನ ಸಂವಹನ ಸಾಮಾನ್ಯ ಜನರಿಗೂ ತಲುಪುವುದರ ಜೊತೆಗೆ ತಿಳಿಯುವಂತಾಗಬೇಕು. ವಿವಿಗಳು ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ರೂಪಿಸುವ ಜವಾಬ್ದಾರಿಯನ್ನು ಹೊರಬೇಕು. ಈ ಹಿಂದೆ ವಿವಿ ಕೇವಲ ಶಿಕ್ಷಣವನ್ನಷ್ಟೇ ನೀಡುತ್ತಿತ್ತು. ಆದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೆರಿಯರ್ ಹಬ್ ನಂತಹ ಕಾರ್ಯಕ್ರಮಗಳನ್ನು ವಿವಿ ಆಯೋಜಿಸುತ್ತಿದೆ. ಇದರ ಜತೆಗೆ ಮೈಸೂರು ವಿವಿ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕೌಶಲ್ಯ ರೂಪಿಸುವ ಸಲುವಾಗಿ ಗೂಗಲ್ ಕ್ಲೌಡ್ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಗೂಗಲ್ ಕ್ಲೌಡ್ ತರಬೇತಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.

ಕುತೂಹಲಿ ಸಂಸ್ಥೆಯ ಕೊಳ್ಳೇಗಾಲ ಶರ್ಮಾ ಮಾತನಾಡಿ, ವಿಜ್ಞಾನ ಪತ್ರಿಕೋದ್ಯಮ ರಾಜ್ಯ ಸೇರಿದಂತೆ ದೇಶದಲ್ಲಿಯೂ ಕಬ್ಬಿಣದ ಕಡಲೆ ಎಂಬ ಅಂಶ ಬೇರೂರಿದೆ. ಇದು ತಪ್ಪು ಕಲ್ಪನೆ. ಮಾಧ್ಯಮಕ್ಕೆ ಇರುವ ಭಾಷೆಯಂತಯೇ ವಿಜ್ಞಾನಕ್ಕೂ ಅದರದೇ ಆದ ಭಾಷೆಯಿದೆ. ಮಾಧ್ಯಮದ ಸವಲತ್ತನ್ನು ಬಳಸಿಕೊಂಡು ವಿಜ್ಞಾನವನ್ನು ಕನ್ನಡದಲ್ಲಿ ಹೇಗೆ ಹೇಳಬಹುದೆನ್ನುವ ಸಲುವಾಗಿ ಕುತೂಹಲಿ ಸಂಸ್ಥೆ ಇಂತಹ ಕಾರ್ಯಾಗಾರಗಳನ್ನು ಮಾಧ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ರೇಡಿಯೋ ಮಾನಸ ಸಂಯೋಜಕಿ ಪ್ರೊ.ಎಂ. ಎಸ್. ಸಪ್ನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್. ಮಮತಾ, ವೈಜ್ಞಾನಿಕ ಅಂಕಣಕಾರ ಟಿ. ಜಿ. ಶ್ರೀನಿಧಿ ಇತರರು ಇದ್ದರು.

Key words: mysore university-VC-Prof.G.Hemanth Kumar