ಎನ್‌ ಇಪಿಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

ಮೈಸೂರು,ಫೆಬ್ರವರಿ,7,2022(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣದಷ್ಟೇ ಪ್ರಾಥಮಿಕ ಶಿಕ್ಷಣಕ್ಕೂ ಒತ್ತು ನೀಡಲಾಗಿದೆ. ಇದರಿಂದ ಮಗು ಮೂರನೇ ವಯಸ್ಸಿನಿಂದಲೇ ಶಿಕ್ಷಣಕ್ಕೆ ತೆರೆದುಕೊಳ್ಳಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ನಗರದ ಲಕ್ಷ್ಮಿಪುರಂನಲ್ಲಿರುವ ಗೋಪಾಲಸ್ವಾಮಿ ಶಿಶುವಿಹಾರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಮಹಾಧ್ವನಿ’ ಕಾಲೇಜು ವಾರ್ಷಿಕ ದಶಮಾನೋತ್ಸವ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಉತ್ತಮವಾದ ಪಾಲಿಸಿ. ಇದರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನೂ ಮೂರು ಹಂತದಲ್ಲಿ ಕಲಿಸಲಾಗುತ್ತದೆ. ಮಕ್ಕಳ ಮೆದುಳು ಮೂರು ವರ್ಷದಿಂದಲೇ ಚುರುಕಾಗಿರುತ್ತದೆ. ಹಾಗಾಗಿ ಮಗುವಿನ ಶಿಕ್ಷಣ ಮೂರು ವರ್ಷದಿಂದಲೇ ಪಾಲಿಸಿಯಲ್ಲಿ ಆರಂಭಿಸಲು ತಜ್ಞರು ಸೂಚಿಸಿದ್ದಾರೆ. ಇದು ಮುಂದೆ ಉನ್ನತ ಶಿಕ್ಷಣಕ್ಕೂ ಪೂರಕವಾದ ಕೆಲಸ ಮಾಡಲಿದೆ ಎಂದರು.

ಬ್ರಿಟಿಷ್ ರೂಪಿಸಿದ್ದ ಶಿಕ್ಷಣದಲ್ಲಿ ಭಾರತೀಯರು ಕೇವಲ ಗುಮಾಸ್ತರಾಗಿ ಮಾತ್ರ ದುಡಿಯಬೇಕು ಎಂಬ ಅಂಶಗಳನ್ನು ಮಾತ್ರ ಬೋಧನೆಯಲ್ಲಿ ಸೇರಿಸಿದ್ದರು. ಆದರೆ, ಹೊಸ ಹೊಸ ಸಂಶೋಧನೆ ನಡೆಯುತ್ತಿದ್ದರೆ ಮಾತ್ರ ಶಿಕ್ಷಣದಲ್ಲಿ ಹೊಸ ರೂಪ ತರಲು ಸಾಧ್ಯ. ಮೈಸೂರು ವಿಶ್ವವಿದ್ಯಾಲಯ 1916ರಲ್ಲಿ ಸ್ಥಾಪನೆ ಆಯಿತು. ಗೋಪಾಲಸ್ವಾಮಿ ಶಿಶು ವಿಹಾರ 1926ರಲ್ಲಿ ಸ್ಥಾಪನೆ ಆಯಿತು. ಮೈವಿವಿಯಲ್ಲಿ ಗೋಪಾಲಸ್ವಾಮಿ ಅವರು ಅಧ್ಯಾಪಕರಾಗಿದ್ದರು. ಆನಂತರವೇ ಅವರು ಮಲ್ಟಿಪಲ್ ಶಿಕ್ಷಣ ರೂಪಿಸುವ ಉದ್ದೇಶದಿಂದ ಶಿಶು ವಿಹಾರ ಸ್ಥಾಪನೆ ಮಡಿದ್ದರು ಎಂದರು.

ಶಿಕ್ಷಣ ವ್ಯಕ್ತಿ ಹಾಗೂ ವ್ಯಕ್ತಿತ್ವ ಎರಡನ್ನೂ ಬೆಳೆಸುತ್ತದೆ. ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ 134 ಕೋಟಿ. ಇದರಲ್ಲಿ ಶೇ.40 ರಷ್ಟು ಯುವಕರೇ ಇದ್ದಾರೆ. ಇವರ ಭವಿಷ್ಯ ರೂಪಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿ ಕೆಲಸ ಮಾಡಲಿದೆ.  ಪದವಿ ಮುಗಿದ ಮೇಲೆ ಜೀವನ ರೂಪಿಸಲು ಬೇಕಾದ ಕೌಶಲ್ಯ ನೀಡುತ್ತದೆ. ಈ ಪಾಲಿಸಿ ಯಶಸ್ವಿಯಾಗಿ ಅನುಷ್ಡಾನವಾಗಬೇಕಾದರೆ ಶಿಕ್ಷಕರ ಪಾತ್ರವೂ ತುಂಬಾ ಇದೆ ಎಂದರು.

ವಿಶ್ವದ ಟಾಪ್ 100 ವಿವಿಗಳಲ್ಲಿ ಭಾರತದ ಒಂದು ವಿಶ್ವವಿದ್ಯಾಲಯವೂ ಇಲ್ಲ. ನೂತನ ಶಿಕ್ಷಣ ನೀತಿಯಿಂದ ಇನ್ನು 10 ವರ್ಷದಲ್ಲಿ ಭಾರತದ 10 ವಿವಿಗಳು 100ರ ಪಟ್ಟಿಯೊಳಗೆ ಬರಬೇಕೆಂಬುದು ಪ್ರಧಾನಿ ಮೋದಿ ಕನಸು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಅಧ್ಯಾಪಕರ ಮೈಂಡ್ ಸೆಟ್ ಬದಲಾಗಬೇಕು. ಆಫ್ ಲೈನ್ ಶಿಕ್ಷಣದ ಜೊತೆಗೆ ಆನ್‌ ಲೈನ್ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಬೇಕೆಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಹಾರಾಜ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಶಿಶುವಿಹಾರ ಅಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಡಾ.ಬಿ.ಜಿ.ನರೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.

Key words:  Mysore university-VC- Prof.G.Hemanth Kumar

website developers in mysore