ದೇಹದ ಜೊತೆ ಮನಸ್ಸಿನ ಆರೋಗ್ಯವೂ ಉತ್ತಮವಾಗಿರಲಿ-ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,9,2022(www.justkannada.in):  ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಮಾಲಿನ್ಯ, ಹಾನಿಕಾರಕ ಅನಿಲಗಳ ಹೊರಸೂಸುವಿಕೆ ಅಧಿಕವಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಮೈಸೂರು ಫಿಜಿಶಿಯನ್ ಮೆಡಿಕಲ್ ಅಂಡ್  ರಿಸರ್ಜ್ ಟ್ರಸ್ಟ್ ವತಿಯಿಂದ ನಡೆದ ಯುವ ವಯಸ್ಕರಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದು ಆಧುನಿಕ ಯುಗ. ನಾವು ಸೇವಿಸುತ್ತಿರುವ ಆಹಾರ ಕಲುಷಿತಗೊಳ್ಳುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ. ಹಾಗಾಗಿ ದೇಹದ ಜೊತೆ ಮನಸ್ಸಿನ ಆರೋಗ್ಯವೂ ಉತ್ತಮವಾಗಿರಬೇಕು. ಇವೆರಡು ಸಮತೋಲನದಲ್ಲಿದ್ದರೆ ಆರೋಗ್ಯವೂ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ಡಬ್ಲ್ಯೂಎಚ್‌ಒ ಪ್ರಕಾರ ಆರೋಗ್ಯವು ಸ್ಥಿರವಾಗಿರಲು ದೈಹಿಕ ಕಸರತ್ತು, ಆಧ್ಯಾತ್ಮಿಕ, ಮಾನಸಿಕ ನೆಮ್ಮದಿಯೂ ತುಂಬಾ ಮುಖ್ಯ ಎಂದಿದೆ. ಕೇವಲ ಸದೃಢ ದೇಹ ಹೊಂದಿದ ಮಾತ್ರಕ್ಕೆ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗದು. ದೇಹ, ಮನಸ್ಸು ಎರಡು ಚೆನ್ನಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಪ್ರತಿಯೊಬ್ಬರು ತಮ್ಮಲ್ಲಿನ ಕೋಪ, ದ್ವೇಷ, ಒತ್ತಡ ಎಲ್ಲವನ್ನೂ ತೊರೆಯಬೇಕು. ವೈಯಕ್ತಿಕ ಸ್ವಚ್ಛತೆ ಬಗ್ಗೆ ಎಲ್ಲರೂ ಗಮನ ಕೊಡಬೇಕು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ನಮ್ಮ ಸಂಘದಿಂದ ತಿಂಗಳಿಗೆ ಒಬ್ಬ ತಜ್ಞರನ್ನು ಕರೆಯಿಸಿ ಉಪನ್ಯಾಸ ನೀಡುವ ಉದ್ದೇಶ ಹೊಂದಲಾಗಿದ್ದು, ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿಯೂ ಇದೆ. ಆರೋಗ್ಯ ಸಾಮಾಜಿಕ ವಿಜ್ಞಾನದ ಬಗ್ಗೆ ಜ್ಞಾನ ವೃದ್ಧಿಸಬೇಕು. ಎಲ್ಲಾ ವಿಚಾರಗಳ ಜ್ಞಾನ ಇರಬೇಕು ಎಂದರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಡಾ.ಪ್ರವೀಣ್ ಕುಲಕರ್ಣಿ ಮಾತನಾಡಿದರು. ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗಡೆ, ಪ್ರೊ.ಎಸ್.ಆರ್. ನಿರಂಜನ ಹಾಗೂ ಪ್ರೊ.ಎಸ್.ಶ್ರೀಕಂಠಸ್ವಾಮಿ ಸೇರಿದಂತೆ ಇತರರು ಇದ್ದರು.

Key words: Mysore university- VC- Prof G Hemanth Kumar