ವಿಜ್ಞಾನ-ಸಾಹಿತ್ಯ ಒಟ್ಟಿಗೆ ಸಾಗಬೇಕು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

 

ಮೈಸೂರು, ಸೆ.23, 2021 : (www.justkannada.in news ) ವಿಜ್ಞಾನ ಮತ್ತು ಸಾಹಿತ್ಯ ಎರಡು ಒಟ್ಟೊಟ್ಟಿಗೆ ಹೋಗಬೇಕು. ಎರಡು ತುಂಬಾ ಮುಖ್ಯವಾದ ಸಂಗತಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಬಳಗ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಸಿ.ನಾಗಣ್ಣ ಅವರು ರಚಿಸಿದ ಹತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೇಳಿದಿಷ್ಟು…

ತಾಯಿ ಹಸು ಹುಲ್ಲು ಮೇಯುವಾಗ ಕರು ಅದರ ಬಾಯಿಯನ್ನೇ ನೋಡುತ್ತಿರುತ್ತಂತೆ. ತನ್ನ ಸರದಿ ಬಂದಾಗ ಹುಲ್ಲು ಮೇಯಲು ಕಲಿಯಬೇಕೆಂಬು ಇದರ ಅರ್ಥ. ಈ ಮಾತು ಎಲ್ಲಾ ರಂಗಗಳಿಗೂ ಅನ್ವಯವಾಗುತ್ತದೆ. ಅನುಭವಸ್ಥರು ಹೊಸಬರಿಗೆ ಮಾರ್ಗದರ್ಶನ ಮಾಡಬೇಕು. ಮತ್ತು ಕೈ ಹಿಡಿದು ನಡೆಸಬೇಕು. ಸಾಹಿತ್ಯ, ವಿಜ್ಞಾನ, ಕಾವ್ಯ ನಮ್ಮ ಎಲ್ಲಾ ಪ್ರಯತ್ನಗಳ ಜೀವಾಳ. ಹಾಗಾಗಿ ಇವು ಒಟ್ಟಿಗೆ ಸಾಗಬೇಕು. ಕುವೆಂಪು ಅವರ ಕಾವ್ಯದ ಶಕ್ತಿ ಎಷ್ಟು ಸದೃಢವಾಗಿತ್ತೋ ಅವರ ವೈಜ್ಞಾನಿಕ ಮನೋಭಾವವೂ ಅಷ್ಟೇ ಪ್ರಖರವಾಗಿತ್ತು.

ನಾಗಣ್ಣನವರ ಕೃತಿರಚನೆಗಳ ಹಿನ್ನೆಲೆ ಬಗ್ಗೆ ಹೇಳುವುದಾದರೆ ಅವರು ಒಬ್ಬ ಶ್ರಮಜೀವಿ. ಅಲಸ್ಯ ತಮ್ಮ ಸಮೀಪ ಸುಳಿಯದಂತೆ ಸದಾ ಜಾಗೃತರಾಗಿರುತ್ತಾರೆ. ಸದಾ ಓದು-ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹಾಗಾಗಿ ಯಾವುದೇ ವಿಷಯ ಕೊಟ್ಟರೂ ಅದಕ್ಕೆ ಒಂದು ಸುಂದರವಾದ ಚೌಕಟ್ಟು ಹಾಕಿ ತಕ್ಷಣವೇ ಲೇಖನವನ್ನು ಸಿದ್ಧಪಡಿಸಬಲ್ಲ ಕಲೆ ಅವರಿಗೆ ಸಿದ್ಧಿಸಿದೆ. ವಿಶ್ವವಿದ್ಯಾಲಯ ನೀಡುವ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಅವರು ನಿರ್ವಹಿಸುತ್ತಾ ಬಂದಿದ್ದಾರೆ.

ಈಗಾಗಲೇ ಪ್ರೊ.ರಂಗಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದಂತೆ ನಾಗಣ್ಣನವರ ಕೊಡುಗೆಗಳನ್ನು ಸರಕಾರದ ಮಟ್ಟದಲ್ಲಿ ಗುರುತಿಸುವ ಕೆಲಸ ಆಗಬೇಕು. ಹಲವು ಸಲಹಾ ಸಮಿತಿಯಲ್ಲಿ ನಾಗಣ್ಣನವರು ಕೆಲಸ ಮಾಡಿದ್ದಾರೆ. ಹಲವಾರು ಸಂಘಸಂಸ್ಥೆಗಳು ಪುರಸ್ಕರಿಸಿವೆ. ಆದರೆ, ಸರಕಾರ ರಾಜ್ಯಮಟ್ಟದಲ್ಲಿ ಇವರನ್ನು ಗುರುತಿಸಿ ಗೌರವಿಸಬೇಕು. ಇದರಿಂದ ಲೇಖಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಡಾ.ಸಿ.ನಾಗಣ್ಣನವರು ತಮ್ಮ ಬರಹ, ಭಾಷಣ, ಉಪನ್ಯಾಸ… ಹೀಗೆ ಸಾರಸ್ವತ ಲೋಕದ ಸಮೃದ್ಧಿಗೆ ಕಾರಣರಾಗಲಿ ಎಂದು ಹಾರೈಸುತ್ತೇನೆ ಎಂದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕಾಳಚೆನ್ನೇಗೌಡ, ಗಾಂಧಿಮಾರ್ಗಿ ಕೆ.ಟಿ.ವೀರಪ್ಪಗೌಡ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್, ಪ್ರೊ.ನೀಲಗಿರಿ ತಳವಾರ್ ಸೇರಿದಂತೆ ಇತರರು ಇದ್ದರು.

key words : mysore-university-vc-hemanth-kumar-naganna-book-relese-function