ಮೈಸೂರು ವಿವಿಯ ಅತಿಥಿ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ವೇತನ ಪರಿಷ್ಕರಣೆ ಪ್ರಸ್ತಾವನೆ ತಿರಸ್ಕಾರ.

ಬೆಂಗಳೂರು,ಜನವರಿ,13,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳು ಹಾಗೂ ಪಿ.ಜಿ.ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮತ್ತು ಇತರ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ವೇತನ ಪರಿಷ್ಕರಣೆ ಪ್ರಸ್ತಾವನೆಯನ್ನು  ಆರ್ಥಿಕ ಇಲಾಖೆಯು ತಿರಸ್ಕರಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಐಎಸ್ ಎನ್ ಪ್ರಸಾದ್, 09.12.2022 ರಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಹಣಕಾಸು ಸಮಿತಿ ಸಭೆಯ ಮುಂದೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳು ಹಾಗು ಪಿ.ಜಿ.ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮತ್ತು ಇತರ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿರುವ ಸಂಬಂಧ ಘಟನೋತ್ತರ ಮಂಜೂರಾತಿ ನೀಡುವ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಮಂಡಿಸಲಾಗಿತ್ತು. ಆದರೆ, ಪ್ರಸ್ತಾಪಿತ ವೇತನ ಪರಿಷ್ಕರಣೆಯು ವಾರ್ಷಿಕ ರೂ.4.71 ಕೋಟಿಗಳ ಹೆಚ್ಚುವರಿ ಆರ್ಥಿಕ ಪರಿಣಾಮವನ್ನೊಳಗೊಂಡಿದ್ದು ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವೇತನ ಪರಿಷ್ಕರಣೆ ಪ್ರಸ್ತಾವನೆ ತಿರಸ್ಕಾರಕ್ಕೆ ಆರ್ಥಿಕ ಇಲಾಖೆ ನೀಡಿರುವ ಕಾರಣಗಳು ಹೀಗಿವೆ..

ದಿನಾಂಕ:09.12.2022ರಂದು ಹಣಕಾಸು ಸಮಿತಿಯ ಮುಂದೆ ಮಂಡಿಸಲಾದ ಮೈಸೂರು ವಿಶ್ವವಿದ್ಯಾನಿಲಯದ 2021-22ನೇ ಸಾಲಿನ ಆದಾಯ ಮತ್ತು ವೆಚ್ಚದ ಪಟ್ಟಿಯ ಪ್ರಕಾರ, 2020–21ರಲ್ಲಿ ವಿಶ್ವವಿದ್ಯಾಲಯದ ಒಟ್ಟು ಆದಾಯ ರೂ.301.78 ಕೋಟಿ ರೂ. ಒಟ್ಟು ವೆಚ್ಚ ರೂ.325.66 ಕೋಟಿಗಳಾಗಿದ್ದು (ರೂ.37.80 ಕೋಟಿ ಸವಕಳಿ ಹೊರತುಪಡಿಸಿ), ರೂ.23.88 ಕೋಟಿಗಳ ವಿತ್ತೀಯ ಕೊರತೆ ಇರುತ್ತದೆ. ಅಂತೆಯೇ, 2021-22ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ಒಟ್ಟು ಆದಾಯ ರೂ.278.8 ಕೋಟಿಗಳು ಹಾಗು ಒಟ್ಟು ವೆಚ್ಚ ರೂ.319.15 ಕೋಟಿಗಳಾಗಿದ್ದು (ರೂ.34.17 ಕೋಟಿ ಸವಕಳಿ ಹೊರತುಪಡಿಸಿ) ವಿತ್ತೀಯ ಕೊರತೆಯ ಪ್ರಮಾಣವು ರೂ.40.17 ಕೋಟಿಗಳಾಗಿದ್ದು, ಸರಿ ಸುಮಾರು ದುಪ್ಪಟ್ಟಾಗಿರುತ್ತದೆ.

2022ರ ಕರ್ನಾಟಕ ಅಧಿನಿಯಮ ಸಂಖ್ಯೆ.26 ರನ್ವಯ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ಕ್ಕೆ ಮಾಡಲಾದ ತಿದ್ದುಪಡಿಯನ್ವಯ ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಹೊಸ ಸಂಯೋಜಿಸುವ ವಿಶ್ವವಿದ್ಯಾಲಯಗಳನ್ನು (Affiliating Universities) ಸ್ಥಾಪಿಸಿರುವ ಹಿನ್ನೆಲೆಯಲ್ಲಿ, ಪ್ರಸ್ತುತ, ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯು ಕೇವಲ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತಗೊಂಡಿದ್ದು. ಇದರಿಂದಾಗಿ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, ವಿಶ್ವವಿದ್ಯಾಲಯವು ತನ್ನ ಬದ್ದ ವೆಚ್ಚಗಳನ್ನು ನಿಯಂತ್ರಿಸುವ ಅವಶ್ಯಕತೆ ಇರುತ್ತದೆ;

ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸದರಿ ಜಿಲ್ಲೆಗಳ ವ್ಯಾಪ್ತಿಗೊಳಪಡುವ ಪಿ.ಜಿ.ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡುವ ಅಧಿಕಾರ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯವು ಹೊಂದಿರುವುದಿಲ್ಲ.

ಮೈಸೂರು ವಿಶ್ವವಿದ್ಯಾಲಯವು ಅತಿಥಿ ಉಪನ್ಯಾಸಕರು ಹಾಗು ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ವೇತನ ಪಾವತಿಗಾಗಿ ಈಗಾಗಲೇ ವಾರ್ಷಿಕ ರೂ.43.47 ಕೋಟಿಗಳನ್ನು ವೆಚ್ಚ ಮಾಡುತ್ತಿದೆ. ಈ ಸಿಬ್ಬಂದಿಗಳ ವೇತನವನ್ನು ಇತ್ತೀಚೆಗಷ್ಟೆ ಅಂದರೆ, ನವೆಂಬರ್-2020ರಲ್ಲಿ ಪರಿಷ್ಕರಿಸಿದ್ದು, ಕೇವಲ ಎರಡು ವರ್ಷಗಳ ಅಂತರದಲ್ಲಿ ಪುನಃ ವೇತನ ಪರಿಷ್ಕರಿಸಲು ಯಾವುದೇ ಸಮರ್ಥನೆ ಇರುವುದಿಲ್ಲ. ಪ್ರಸ್ತಾಪಿತ ವೇತನ ಪರಿಷ್ಕರಣೆಯನ್ನು ಗಮನಿಸಿದಾಗ, ಎಲ್ಲಾ ಹಂತದಲ್ಲಿ ವೇತನವನ್ನು ಸರಿ ಸುಮಾರು ದುಪ್ಪಟ್ಟು ಹೆಚ್ಚು ಮಾಡಲಾಗಿರುತ್ತದೆ. 12 ಘಂಟೆಗಳ ಕಾರ್ಯಧಾರ ಹೊಂದಿರುವ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ ಅತಿಥಿ ಉಪನ್ಯಾಸಕರ ವೇತನವನ್ನು ಹಾಲಿ ರೂ.28,000/-ಗಳಿಂದ ರೂ.37,000/-ಗಳಿಗೆ: ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದ ಉಪನ್ಯಾಸಕರ ವೇತನವನ್ನು ರೂ.24,000/-ಗಳಿಂದ ರೂ.26.400/-ಗಳಿಗೆ ಹಾಗು ಕೆಲವು ಉಪನ್ಯಾಸಕರಿಗೆ ಮಾಸಿಕ ಗರಿಷ್ಠ ರೂ.60,000/-ಗಳಿಗೆ ವೇತನವನ್ನು ಹೆಚ್ಚಿಸಲಾಗಿದ್ದು, ಇದು ಯುಜಿಸಿಯು ಪೂರ್ಣ ಕಾರ್ಯಭಾರಕ್ಕೆ ನಿಗದಿಪಡಿಸಿರುವ ಗರಿಷ್ಟ ರೂ.50,000/-ಗಳಿಗಿಂತಲೂ ಹೆಚ್ಚಾಗಿರುತ್ತದೆ. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಿರುವ ಸಂಭಾವನೆಗಿಂತಲೂ ಹೆಚ್ಚಾಗಿರುತ್ತದೆ. ಆದುದರಿಂದ, ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ:14.01.2022ರ ಸರ್ಕಾರದ ಆದೇಶದಲ್ಲಿ ನಿಗದಪಡಿಸಿರುವ ಮಾನದಂಡಗಳನ್ವಯ ವೇತನವನ್ನು ನಿಗದಿಪಡಿಸಲು ಮೈಸೂರು ವಿಶ್ವವಿದ್ಯಾಲಯವು ಕ್ರಮವಹಿಸತಕ್ಕದ್ದು .  ಮೈಸೂರು ವಿಶ್ವವಿದ್ಯಾಲಯವು ಬೋಧಕ/ಬೋಧಕೇತರ ವೃಂದಗಳಲ್ಲಿ ಮಂಜೂರಾಗಿರುವ ಹುದ್ದೆಗಳಿಗೂ ಮೀರಿ ಅಧಿಕ ಸಂಖ್ಯೆಯಲ್ಲಿ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದು, ಅವುಗಳನ್ನು ಸಹ ಮರು ಪರಿಶೀಲಿಸಬೇಕು.

ಈ  ಕಾರಣಗಳಿಂದಾಗಿ ಮೈಸೂರು ವಿಶ್ವವಿದ್ಯಾನಿಲಯುವ ವಿವಿಧ ವಿಭಾಗಗಳು ಹಾಗು ಪಿ.ಜಿ.ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮತ್ತು ಇತರ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ವೇತನ ಪರಿಷ್ಕರಣೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪುವುದಿಲ್ಲವೆಂದು ಆರ್ಥಿಕ ಇಲಾಖೆ ತಿಳಿಸಿದೆ.

Key words: Mysore University -guest lecturers – non-teaching -staff -salary –revision- proposal -rejected.