ಗಾಂಧಿ ವಿಚಾರ ಎಲ್ಲಾ ಕಾಲಕ್ಕೂ ಸಲ್ಲುವಂತದ್ದು: ಮೈವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್

ಮೈಸೂರು, ಅ.02, 2022 : (www.justkannada.in news) ಭಾರತ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಮಾತ್ರವಲ್ಲದೆ, ವಿಶ್ವದ ದೃಷ್ಟಿಯಲ್ಲಿಯೂ ಒಬ್ಬ ಅಸಾಮಾನ್ಯ ಮಹಾ ಪುರುಷರೆನಿಸಿಕೊಂಡಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಗಾಂಧಿ ಅಧ್ಯಯನ ಕೇಂದ್ರ ಮತ್ತು ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರದ ಸಂಘದ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ 154ನೇ ಗಾಂಧಿ ಜಯಂತಿ ಪ್ರಯುಕ್ತ ನಡೆದ ಅಹಿಂಸಾ ದಿನಾಚರಣೆಯಲ್ಲಿ ಮಾತನಾಡಿದರು.

ಗಾಂಧಿ ಜಯಂತಿ ಅಂಗವಾಗಿ ಇಂದು ಇಲ್ಲಿ ವಿಶ್ವ ಅಹಿಂಸಾ ದಿನವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ಅವರು ದೇಶಕ್ಕಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ನಡೆಸಿದ್ದಾರೆ. ಈ ವೇಳೆ ಅವರು ಕೈಗೊಂಡ ನಿರ್ಧಾರಗಳು, ಅವರ ದೂರದೃಷ್ಟಿತ್ವ ದೇಶದ ಚರಿತ್ರೆಯ ಪಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬಹುದಾಗಿದೆ ಎಂದರು.

ಸತ್ಯ, ಅಹಿಂಸೆ, ಸತ್ಯಾಗ್ರಹಗಳ ತಾತ್ವಿಕತೆ, ಆರ್ಥಿಕ, ಸಾಮಾಜಿಕ, ರಾಜಕೀಯ ವಿಚಾರಗಳು, ಸಂಸ್ಕೃತಿ, ಜನಜೀವನ, ಸಾಹಿತ್ಯ ಚಿಂತನೆಗಳು – ಹೀಗೆ ಒಂದಲ್ಲ ಹತ್ತು ಹಲವಾರು ವಿಷಯಗಳಲ್ಲಿ ಇವರ ಜಿಜ್ಞಾಸೆ ನಡೆದು ಪಕ್ವಗೊಂಡು ಅವುಗಳ ಫಲಕೃಷಿ ಭವ್ಯ ಭಾರತ ನಿರ್ಮಾಣದಲ್ಲಿ ಸಾರ್ಥಕವೆನಿಸಿದೆ ಎಂದು ತಿಳಿಸಿದರು.

ಗಾಂಧೀಜಿಯವರಲ್ಲಿದ್ದ ಉದಾರತೆ, ಅಹಿಂಸಾ ನಿಲುವು ಮಾನವೀಯತೆ, ಸತ್ಯಸಂಧತಿ, ಲೋಕಕಲ್ಯಾಣ, ದೃಷ್ಟಿ, ಶಾಂತಿ, ಸಹನೆ, ಸಾಧಿಸುವ ಛಲ, ಸರಳತೆ, ಸಜ್ಜನಿಕೆ – ಹೀಗೆ ಹತ್ತು ಹಲವು ಗುಣಗಳು ಇವರ ಉತ್ಕೃಷ್ಟ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ.
ಪ್ರಾಯಶಃ ಗಾಂಧೀಜಿಯವರ ಬದುಕಿನ ಮತ್ತು ಚಿಂತನೆಯ ಪ್ರಸ್ತುತತೆ ಅಂದಿಗಿಂತ ಇಂದು ಹೆಚ್ಚು ಎನಿಸುತ್ತದೆ. ಅವರ ಎಲ್ಲಾ ಸಾಮಾಜಿಕ, ಆರ್ಥಿಕ ಮತ್ತು ದಾರ್ಶನಿಕ ಚಿಂತನೆಗಳು ಮುಂದಿನ ತಲೆಮಾರಿಗೆ ಆದರ್ಶವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಪ್ರಸ್ತುತ ದಿನಗಳಲ್ಲಿ ಗಾಂಧೀಜಿಯವರ ಮಾದರಿಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡರೆ ಅದಕ್ಕಿಂತ ಮತ್ತೊಂದು ಆದರ್ಶ ಜೀವನ ಇರಲಾರದು. ಈ ಕಾರಣಗಳಿಂದ ಅವರ ಚಿಂತನೆಯನ್ನು ಕುರಿತ ಜಿಜ್ಞಾಸೆ ಮತ್ತು ಅಧ್ಯಯನಶೀಲತೆ ಇಂದು ವಿಶ್ವವ್ಯಾಪಿಯಾಗಿ ಗರಿಗೆದರಿವೆ. ಈ ಹಿಂದೆ ಪ್ರಪಂಚದ ಬಹುತೇಕ ರಾಷ್ಟ್ರಗಳು ಒಮ್ಮತದ ಮೂಲಕ ಗಾಂಧೀಜಿ ಅವರು ಹುಟ್ಟಿದ ಆಕ್ಟೋಬರ್ 2ನೇ ದಿನವನ್ನು ‘ವಿಶ್ವ ಅಹಿಂಸಾ ದಿನ’ ಎಂದು ಘೋಷಿಸಿ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದೆ, ಇದು ನಿಜಕ್ಕೂ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ, ಪ್ರಸಾರಾಂಗ ನಿವೃತ್ತ ಉಪ ನಿರ್ದೇಶಕ ಸ.ರ, ಸುದರ್ಶನ್, ಗಾಂಧಿ ಭವನದ ನಿರ್ದೇಶಕ ಶೇಖರ್‌ ಸೇರಿದಂತೆ ಇತರರು ಇದ್ದರು.

key words : mysore-university-gandhi-jayanthi-celebration-vc