ಮೈಸೂರು ವಿವಿಯ ದೂರ ಶಿಕ್ಷಣ ಕೋರ್ಸ್ ಅಭಾಧಿತ : ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಸ್ಪಷ್ಟನೆ.

 

ಮೈಸೂರು, ಡಿ.20, 2019 : ಯುಜಿಸಿ ಮಾನ್ಯತೆಯೊಂದಿಗೆ ಆರಂಭಿಸಿರುವ ದೂರ ಶಿಕ್ಷಣ ಕೋರ್ಸ್ ಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲಾಗದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.

ಸಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ದೂರಶಿಕ್ಷಣ ಕೋರ್ಸ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಇದೇ ಮಂಗಳವಾರ ನಡೆದ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಅವರು ಸೂಚಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಇನ್ಮುಂದೆ ಮುಕ್ತ ವಿವಿಯಲ್ಲಿ ಮಾತ್ರ ದೂರ ಶಿಕ್ಷಣ ವ್ಯಾಸಂಗ ಮಾಡಬೇಕು ಎಂಬ ಗೊಂದಲವನ್ನು ಉಂಟುಮಾಡಿತ್ತು.

ಈ ಹಿನ್ನೆಲೆಯಲ್ಲಿ ಜಸ್ಟ್ ಕನ್ನಡ ಡಾಟ್ ಇನ್ ಮೈಸೂರು ವಿವಿ ಕುಲಪತಿ ಪ್ರೊ.ಜೆ,ಹೇಮಂತ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದಿಷ್ಟು….

ಸಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ದೂರಶಿಕ್ಷಣ ಕೋರ್ಸ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಆತಂಕಗೊಳ್ಳುವ ಅವಶ್ಯಕತೆಯಿಲ್ಲ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ರಾಜ್ಯದ ವಿವಿಧ ವಿವಿಗಳಲ್ಲಿ ನಡೆಯುತ್ತಿರುವ ದೂರಶಿಕ್ಷಣ ಕೋರ್ಸ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ತಾನು ಮಾತ್ರ ದೂರಶಿಕ್ಷಣ ನೀಡಲು ಅನುಮತಿ ನೀಡಬೇಕೆಂದು ಕರ್ನಾಟಕ ರಾಜ್ಯ ಮುಕ್ತ ವಿವಿಯು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಶಿಕ್ಷಣ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ ಎಂಬ ವರದಿಗಳು ಮಾಧ್ಯಮದಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾದದ್ದು.

ಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಎಲ್ಲ ವಿವಿಯ ದೂರಶಿಕ್ಷಣ ಕೋರ್ಸ್‌ಗಳ ರದ್ದತಿ ಬಗ್ಗೆ ಕೇವಲ ಚರ್ಚೆ ನಡೆದಿದ್ದು, ಯಾವುದೇ ನಿರ್ಣಯಕ್ಕೆ ಬಂದಿಲ್ಲ. ವಿವಿಯ ಎಲ್ಲ ದೂರಶಿಕ್ಷಣ ಕೋರ್ಸ್‌ಗಳನ್ನು ಮೊದಲಿನಂತೆಯೇ ಮುಂದುವರಿಸಲಾಗುತ್ತದೆ. ಜತೆಗೆ ಮುಂದಿನ ಐದು ವರ್ಷಗಳಿಗೆ ಮೈಸೂರು ವಿವಿಯ ಎಲ್ಲ ದೂರಶಿಕ್ಷಣ ಕೋರ್ಸ್‌ಗಳಿಗೆ ಯುಜಿಸಿ ಮತ್ತು ಕರ್ನಾಟಕ ಸರ್ಕಾರದ ಅನುಮತಿಯಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಸಂಬಂಧ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.

 

key words : mysore-university-distance-education-continues-vc-hemanth.kumar