ಏಳು ದಿನಗಳ ಒಳಗೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಮೈಸೂರು ತಹಶಿಲ್ದಾರ್ ರಮೇಶ್ ಬಾಬು ಆದೇಶ…

ಮೈಸೂರು,ನ,21,2019(www.justkannada.in):  ಸರ್ಕಾರಿ ಜಮೀನಿನನ್ನ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಅನಧಿಕೃತ ಕಟ್ಟಡಗಳನ್ನ ಏಳು ದಿನಗಳ ಒಳಗೆ ತೆರವುಗೊಳಿಸುವಂತೆ ಉಪತಹಶೀಲ್ದಾರ್ ಗೆ ಮೈಸೂರು ತಹಶಿಲ್ದಾರ್ ರಮೇಶ್ ಬಾಬು ಆದೇಶಿಸಿದ್ದಾರೆ.

ಮೈಸೂರು ತಾಲ್ಲೂಕು ವರುಣಾ ಹೋಬಳಿಯ ಉತ್ತನಹಳ್ಳಿಯಲ್ಲಿ ಸರ್ವೇ ನಂ 7/1 ಮತ್ತು ಸರ್ವೇ ನಂ 13ರ ಸರ್ಕಾರಿ ಜಮೀನಿನಲ್ಲಿನ ಕಟ್ಟೆ ಜಾಗವನ್ನ  ಶಿವಮಲ್ಲು ಎಂಬುವವರು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ಕಟ್ಟಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಕ್ಕೆ ವಂಚಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ತಾಲ್ಲೂಕು ಏಳಿಗೆಹುಂಡಿ ಗ್ರಾಮದ ಶಿವಣ್ಣ ಮತ್ತು ಇತರರು ಹಾಗೂ ರವೀಂದ್ರ ಅವರು ತಹಶೀಲ್ದಾರ್  ರಮೇಶ್ ಬಾಬು ಅವರಿಗೆ ದೂರು ನೀಡಿದ್ದರು.

ಒತ್ತುವರಿ ಮಾಡಿರುವ ಸಂಬಂಧ ಭೂಮಾಪಕರಿಂದ ಅಳತೆ ಬಾಬ್ತು ನಕ್ಷೆ ಪಡೆದು ಪರಿಶೀಲಿಸಿದಾಗ ನಂ 7/1 ಮತ್ತು ಸರ್ವೇ ನಂ 13ರ ಸರ್ಕಾರಿ ಜಮೀನು ಒತ್ತುವರಿಯಾಗಿರುವುದು ಕಂಡು ಬಂದಿದೆ. ಹೀಗಾಗಿ  ಸರ್ಕಾರಿ ಜಮೀನಿನನ್ನ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಅನಧಿಕೃತ ಕಟ್ಟಡಗಳನ್ನ 7ದಿನಗಳ ಒಳಗೆ ತೆರವುಗೊಳಿಸುವಂತೆ ಉಪತಹಶೀಲ್ದಾರರಿಗೆ ಮೈಸೂರು ತಹಶೀಲ್ದಾರ್ ರಮೇಶ್ ಬಾಬು ಆದೇಶಿಸಿದ್ದಾರೆ.

ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ- ದೂರುದಾರರಾದ ರವೀಂದ್ರ ಆಗ್ರಹ…

ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಗೆ ಪ್ರತಿಕ್ರಿಯಿಸಿದ ದೂರುದಾರರಾದ ರವೀಂದ್ರ ಅವರು, ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಕಟ್ಟೆ ಜಾಗವನ್ನ ಒತ್ತವರಿ ಮಾಡಿಕೊಂಡು ವಾಣಿಜ್ಯಕಟ್ಟಡ ಕಟ್ಟಿ ಸರ್ಕಾರಕ್ಕೆ ವಂಚಿಸಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹಾಗೂ ಸರ್ಕಾರಿ ಕಟ್ಟೆ ಜಾಗದಲ್ಲಿ ಕಟ್ಟಡ ಕಟ್ಟುವ ವೇಳೆ ತಡೆ ನೀಡದೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

ಸರ್ವೆ ನಂ 13ರಲ್ಲಿ 1 ಎಕರೆ 33 ಗುಂಟೆ ಸರ್ಕಾರಿ ಕಟ್ಟೆ ಜಾಗವಿದೆ. ಇದರಲ್ಲಿ ಅರ್ಧ ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದ್ದು ಈ ಬಗ್ಗೆ ನಾನು ದೂರು ನೀಡಿದ್ದೇನೆ. ಕೋಟ್ಯಾಂತರ ಬೆಲೆ ಬಾಳುವ ಈ ಸರ್ಕಾರಿ ಕಟ್ಟೆ ಜಾಗದಲ್ಲಿ ಕಮರ್ಷಿಯಲ್ ಕಟ್ಟಡಗಳನ್ನ ಕಟ್ಟಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದು ವಿಚಾರಣೆ ಹಂತದಲ್ಲಿದೆ. ಸರ್ವೆ ನಂ 13 ಸರ್ಕಾರಿ ಕಟ್ಟೆ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ತಹಶೀಲ್ದಾರ್ ಗಮನಕ್ಕೆ ತಂದು ದೂರು ನೀಡಿದ್ದೆ. ಈಗ ನಮ್ಮ ದೂರನ್ನ ಪರಿಗಣಿಸಿ ತಹಶೀಲ್ದಾರ್,  ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿ ಕಟ್ಟಿರುವ ಅನಧಿಕೃತ ಕಟ್ಟಡ ತೆರವುಗೊಳಿಸಲು ಆದೇಶಿಸಿದ್ದಾರೆ.

ಹಾಗೆಯೇ ಒತ್ತುವರಿ ಸರ್ಕಾರಿ ಕಟ್ಟೆ ಜಾಗವನ್ನ 1952-53ರಲ್ಲಿ ನಮಗೆ ಸಾಗುವಳಿಯಾಗಿ ನೀಡಿದ್ದರು ಎಂದು ಒತ್ತುವರಿದಾರರು ನೀಡಿರುವ ದಾಖಲೆಗಳು ಸುಳ್ಳು ಎಂದು ತಹಶೀಲ್ದಾರ್ ಅಂಗೀಕರಿಸಿದ್ದಾರೆ. ಹೀಗಾಗಿ ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಕಟ್ಟೆ ಜಾಗವನ್ನ ಒತ್ತವರಿ ಮಾಡಿಕೊಂಡು ವಾಣಿಜ್ಯ ಕಟ್ಟಡ ಕಟ್ಟಿ ಸರ್ಕಾರಕ್ಕೆ ವಂಚಿಸಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ರವೀಂದ್ರ ಅವರು  ಒತ್ತಾಯಿಸಿದ್ದಾರೆ.

Key words: Mysore- Tehsildar- Ramesh Babu – ordered – clearance -government land- within- seven days.