ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕರಿಸಬಾರದು-ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಸೇರಿ ಕೈ ಮುಖಂಡರ ಒತ್ತಾಯ…

ಮೈಸೂರು,ಡಿ,12,2019(www.justkannada.in): ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ನೀಡಿರುವ ರಾಜೀನಾಮೆಯನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಒಪ್ಪಿಕೊಳ್ಳಬಾರದು ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಸೇರಿ ಮೈಸೂರಿನ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ, 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲು ಹಿನ್ನೆಲೆ. ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ನೀಡಿರುವ ರಾಜೀನಾಮೆಯನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಒಪ್ಪಿಕೊಳ್ಳಬಾರದು.  ಮುಂದೆಯೂ ಅವರನ್ನೇ ಪಕ್ಷದ ಉನ್ನತ ಹುದ್ದೆಗಳಲ್ಲಿ ಮುಂದುವರೆಸಬೇಕು. ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸುವ ರಾಜಕಾರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಆಗ್ರಹಿಸಿದರು.

‘ಕೈ’ ಪಕ್ಷದ ಸೋಲಿಗೆ ಕೇವಲ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್  ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಎಂಟು ಕಾರಣಗಳಿವೆ ಎಂಬ ವಿಚಾರವನ್ನೊಳಗೊಂಡ ಮೂರು ಪುಟಗಳ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ರವಾನಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಕೇವಲ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೋಲಿನ ಹೊಣೆ ಹೊರಬೇಕಿದೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ 1 ಸಾವಿರ ಕೋಟಿ ಹಣ ಹಂಚಿಕೆ ಮಾಡಿದೆ. ಇಡಿ, ಐಟಿ ಮೊದಲಾದ ತನಿಖಾ ಸಂಸ್ಥೆಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಸ್ವತಃ ಸಿ.ಎಂ., ಯಡಿಯೂರಪ್ಪ ಅವರು ಜಾತಿ ಆಧಾರದ ಮೇಲೆ ಮತ ಯಾಚಿಸಿದರೂ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಚುನಾವಣೆ ಹೊಸ್ತಿಲಲ್ಲಿರುವಾಗ ಕಾಂಗ್ರೆಸ್ ಜೆಡಿಎಸ್ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಲಿವೆ ಎಂದು ನೀಡಿದ ಹೇಳಿಕೆಗಳೂ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಯ್ತು ಎಂದು ತಿಳಿಸಿದರು.

ಸಿದ್ದರಾಮಯ್ಯ ಒಬ್ಬಂಟಿ ಎಂಬಂತೆ ಬಿಂಬಿಸಿದ್ದೂ ಕೂಡ ಸೋಲಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಇಲ್ಲದೇ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸಲ್ಲಿಸಿರುವ ರಾಜೀನಾಮೆ ಅಂಗೀಕರಿಸಬಾರದು. ಇಬ್ಬರನ್ನೂ ಅದೇ ಹುದ್ದೆಗಳಲ್ಲಿ ಮುಂದುವರೆಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್  ತಿಳಿಸಿದರು.

ಸಿದ್ದರಾಮಯ್ಯನವರ ರಾಜೀನಾಮೆಯನ್ನು ಅಂಗೀಕರಿಸಿದರೆ ಕಾಂಗ್ರೆಸ್ ಪಕ್ಷ ಮತ್ತಷ್ಟು ದುರ್ಬಲವಾಗಲಿದೆ. ಸಿದ್ದರಾಮಯ್ಯರನ್ನು ಕಡೆಗಣಿಸಿದರೆ ಉತ್ತರ ಪ್ರದೇಶ, ಬಿಹಾರ, ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಬಂದಿರುವ ದುಸ್ಥಿತಿ ಕರ್ನಾಟಕದಲ್ಲೂ ಬರಲಿದೆ ಎಂದು ಲಕ್ಷ್ಮಣ್ ಹೇಳಿದರು.

Key words: mysore- Siddaramaiah- Dinesh Gundurao- resignation – not be accepted-Manjula Mansa