ಮೈಸೂರಿನ ಸೆಲ್ಫೀ ಸ್ಪಾಟ್ ಮತ್ತು ಜಾಹೀರಾತು !

ಸೆಲ್ಫೀ ಸ್ಪಾಟ್ ಮತ್ತು ಜಾಹೀರಾತು!
———-
ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಅಂಬಾರಿ ಆನೆ ಮಾದರಿಯ ಆಕರ್ಷಕ ಪ್ರತಿರೂಪ ಸ್ಥಾಪಿಸಿ ಆ ಜಾಗವನ್ನು ಆಕರ್ಷಕ ಸೆಲ್ಫಿ ಸ್ಪಾಟ್ ಆಗಿ ಮಾಡಲು ಸಿದ್ಧತೆ ನಡೆದಿದೆ.
ವಿಶ್ವಪ್ರಸಿದ್ಧ ವಿಜಯ ದಶಮಿ ಮೆರವಣಿಗೆಯಲ್ಲಿ ಸಾಗುವ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಆನೆಯನ್ನು ಹೋಲುವ ಈ ಪ್ರತಿರೂಪವನ್ನು ಮೈಸೂರನ್ನು ಪ್ರತಿನಿಧಿಸುವ ‘M’ ಅಕ್ಷರದ ರೂಪದಲ್ಲಿ ಸ್ಥಾಪಿಸಲಾಗಿದೆಯೆಂದೂ, ಇದನ್ನು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಮಂಕುತಿಮ್ಮ ಸ್ಟುಡಿಯೋ ಸಂಸ್ಥೆಯ ಸೌಜನ್ಯ ಪ್ರಭು ಹಾಗೂ mysuru.org ನಿರ್ಮಾಣ ಮಾಡಿ ವಿನ್ಯಾಸಗೊಳಿಸಿದ್ದಾರೆಂದೂ,ಇದನ್ನು ಸಂಸದ ಪ್ರತಾಪ್ ಸಿಂಹ ಶೀಘ್ರದಲ್ಲಿ ಉದ್ಘಾಟನೆ ಮಾಡಲಿದ್ದಾರೆಂದು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆಂದೂ ವರದಿಯಾಗಿದೆ.
ಈ ಪ್ರತಿರೂಪವನ್ನು ಮಂಕುತಿಮ್ಮ ಸ್ಟುಡಿಯೋ ಸಂಸ್ಥೆಯವರು ಈ ವಿಮಾನ ನಿಲ್ದಾಣದ ಸೆಲ್ಫೀ ಸ್ಪಾಟ್ ಗಾಗಿಯೇ ಸಿದ್ಧಪಡಿಸಿದ್ದಾರೆಯೋ ಅಥವಾ ಈಗಾಗಲೇ ಮಂಕುತಿಮ್ಮ ಡಾಟ್ ಕಾಂ ಕಂಪನಿಯ ಟೀ ಷರಟುಗಳ ಮೇಲೆ ಬಳಸುತ್ತಿದ್ದ ಲೋಗೋವನ್ನೇ ಈ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗುತ್ತಿರುವ ಸೆಲ್ಫೀ ಸ್ಪಾಟ್ ಗೆಂದು ಬಳಸುತ್ತಿದ್ದಾರೆಯೋ ಎಂಬ ಅನುಮಾನ ಮೂಡಿದೆ.
ಈಗಾಗಲೇ ಮಂಕುತಿಮ್ಮ.ಕಾಂ ಕಂಪನಿಯ ಟೀ ಷರಟುಗಳ ಮೇಲೆ ಇದೇ ಲೋಗೋ ಪ್ರಿಂಟ್ ಮಾಡಿ ಮಾರಾಟ ಮಾಡಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡುತ್ತಿರುವ ಅಂಬಾರಿಯ ಪ್ರತಿರೂಪ ಹಾಗೂ ಮಂಕುತಿಮ್ಮ ಸ್ಟುಡಿಯೋ ಕಂಪನಿಯು ಮಾರಾಟ ಮಾಡುವ ಟೀ ಷರಟಿನಲ್ಲಿ ಬಳಸಿರುವ ಲೋಗೋ 100% ಹೋಲುತ್ತದೆ.
ಸೆಲ್ಫೀ ಸ್ಪಾಟ್ ಹೆಸರಲ್ಲಿ ನಿರ್ಮಾಣ ಆಗಿರುವ ಅಂಬಾರಿಯ ಆನೆಯ ಈ ಪ್ರತಿರೂಪವು ಮಂಕುತಿಮ್ಮ ಡಾಟ್ ಕಾಂ ಕಂಪನಿಯ ಟೀ ಷರಟಿನ ಜಾಹೀರಾತಲ್ಲದೆ ಬೇರೇನೂ ಅಲ್ಲ.
ವಿಮಾನ ನಿಲ್ದಾಣವು ಖಾಸಗಿ ಸ್ಥಳವಲ್ಲ.ಅದು ಸರಕಾರಿ ಜಾಗ.ಸರಕಾರಿ ಜಾಗದಲ್ಲಿ ಯಾವುದೇ ಕಂಪನಿಯ ಲೋಗೋ ಬಳಸಿ ಜಾಹೀರಾತು ನೀಡಲು ಟೆಂಡರ್ ವಿನಹ ಅನುಮತಿ ನೀಡಲಾಗದು.
ಮಂಕುತಿಮ್ಮ ಡಾಟ್ ಕಾಂ ಕಂಪನಿಯ ಟೀ ಷರಟಿನ ಲೋಗೋವನ್ನು ಸೆಲ್ಫೀ ಸ್ಪಾಟ್ ಹೆಸರಿನಲ್ಲಿ ಪ್ರದರ್ಶಿಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಜಾಹೀರಾತು ನೀಡಲು ಅನುಮತಿ ನೀಡಿದವರಾರು?
ಈ ವಿಚಾರವಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಪಷ್ಟನೆ ನೀಡಲಿ.

-ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು