JK FOCUS : ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಅಜ್ಜಯ್ಯನಕೆರೆ ಸುತ್ತ ಈಗ ಡೆಬ್ರಿಸ್ ಸಾಮ್ರಾಜ್ಯ…! 

ಮೈಸೂರು, ಅ.12, 2021 : (www.justkannada.in news ) ನಗರದ ಸುತ್ತಲಿನ ರಿಂಗ್‌ ರಸ್ತೆಯಲ್ಲಿ ಡೆಬ್ರಿಸ್‌ ಸುರಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಎಲ್ಲೆಂದರಲ್ಲಿ ಕಸ ಸುರಿದರೆ, ದಂಡ ತೆರಬೇಕಾಗುತ್ತದೆ. ಜತೆಗೆ ಜೈಲು ವಾಸವನ್ನು ಅನುಭವಿಸಬೇಕಾಗುತ್ತದೆ ಎಂಬ ಸಚಿವರ ಎಚ್ಚರಿಕೆಗೆ ಈಗ ಡೊಂಟ್ ಕೇರ್.
“ವರ್ಷದ 365 ದಿನಗಳಲ್ಲೂ ಮೈಸೂರು ಸ್ವಚ್ಛವಾಗಿರಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ವಿಭಾಗವಾರು ತಂಡ ಮಾಡಿ ಜವಾಬ್ದಾರಿ ಕೊಡಲಾಗಿದೆ” ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದರು.
ಆದರೆ, ಇದೀಗ ಸಚಿವರ ಎಚ್ಚರಿಕೆ ಡೊಂಟ್ ಕೇರ್ ಎಂಬಂತಾಗಿದೆ. ರಿಂಗ್ ರಸ್ತೆ ಬಳಿ ಕಟ್ಟಡ ಸಾಮಾಗ್ರಿಗಳನ್ನು ಸುರಿಯುವ ಪರಿಪಾಟಲು ಮತ್ತೆ ಶುರುವಾಗಿದೆ. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪ್ರಯತ್ನದ ಫಲವಾಗಿ , ದಟ್ಟಗಳ್ಳಿಯ ಅಜ್ಜಯ್ಯನಕೆರೆ ಒತ್ತುವರಿ ಹಾಗೂ ತ್ಯಾಜ್ಯ ತೆರೆವುಗೊಳಿಸಲಾಗಿತ್ತು. ಪರಿಣಾಮ ಅದೊಂದು ಸುಂದರ ಕೆರೆಯಾಗಿ ಮಾರ್ಪಾಡಾಗಿತ್ತು. ಮಳೆ ಬಂದು ಕೆರೆಯಲ್ಲಿ ನೀರು ನಿಂತು ಹಲವಾರು ಪಕ್ಷಿಗಳ ಆವಾಸ ಸ್ಥಾನವಾಗಿತ್ತು.
ಆದರೆ, ಇದೀಗ ಈ ಕೆರೆಯ ಸುತ್ತಲು ಡೆಬ್ರೀಸ್ ಸುರಿಯುವ ಪರಿಪಾಟ ನಿಧಾನವಾಗಿ ಆರಂಭವಾಗಿದೆ.ನಿತ್ಯ ಹಂತ ಹಂತವಾಗಿ ಕಸ ಸುರಿಯಲಾಗುತ್ತಿದೆ. ಆ ಮೂಲಕ, ಕೆರೆಯನ್ನು ಡೆಬ್ರಿಸ್ ಗಳಿಂದ ಮುಚ್ಚಿ ಕೆರೆ ಒತ್ತುವರಿ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾಡಳಿತ ಎಚ್ಚರಿಸಿತ್ತು :
“ಮುಡಾ, ಕಾರ್ಪೋರೇಶನ್, ಲೋಕೋಪಯೋಗಿ, ಜಲಮಂಡಳಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ”. “ಸಾರ್ವಜನಿಕರು ಸಹ ಕಸ ಹಾಕಬಾರದು. ಇನ್ನು ರಸ್ತೆ ಹಾಗೂ ರಸ್ತೆ ಪಕ್ಕ ಎಲ್ಲೆಂದರಲ್ಲಿ ಕಸ ಹಾಕುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಕ್ರಮವಾಗಿ ಕಸ ಸುರಿದರೆ ಲಾರಿ ಮಾಲೀಕರಿಗೆ ದಂಡ ಹಾಕಿ ಜೈಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಂಗಳುಗಳ ಹಿಂದೆಯಷ್ಟೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದರು.
ಜತೆಗೆ, ‘ಡೆಬ್ರಿಸ್‌ ಸುರಿಯುವ ವಾಹನಗಳ ಮಾಲೀಕರು ಮತ್ತು ಚಾಲಕರ ಸಭೆ ನಡೆಸಿ, ಎಲ್ಲೆಂದರಲ್ಲಿಡೆಬ್ರಿಸ್‌ ಸುರಿದರೆ ಕಾನೂನಿನಡಿ ದುಬಾರಿ ದಂಡ ವಿಧಿಸುವುದರೊಂದಿಗೆ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿ” ಎಂದು ಸಹ ತಾಕೀತು ಮಾಡಿದ್ದರು.
ಆದರೆ ಇದೀಗ, ಪರಿಸ್ಥಿತಿ ಭಿನ್ನವಾಗಿದೆ. ಸುಂದರ ಕೆರೆ, ಕಸಯುಕ್ತವಾಗುತ್ತಿದೆ. ಆ ಮೂಲಕ ಕೆರೆ ಒತ್ತುವರಿ ನಡೆಯುತ್ತಿರುವ ಅನುಮಾನ ಮೂಡಿದೆ. ಈಗಲಾದರು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಂಡು ಕೆರೆ ಸೌಂದರ್ಯ ಉಳಿಸಬೇಕಾಗಿದೆ.

key words : mysore-ring.road-debrise-lake-enchrochment-dattagalli-ajjayanakere-karnataka