ಕರ್ನಾಟಕದ 7 ಅದ್ಭುತ’ಗಳಲ್ಲೊಂದು ಮೈಸೂರು ಅರಮನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

kannada t-shirts

– ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಂದ ಘೋಷಣಾ ಫಲಕ  ಸ್ವೀಕಾರ
ಮೈಸೂರು, ಫೆಬ್ರವರಿ 26, 2023 (www.justkannada.in): ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕದ ೭ ಅದ್ಭುತಗಳು’ ಎಂದು ಘೋಷಿಸಿದ್ದಾರೆ. ಈ ಪೈಕಿ ಮೈಸೂರಿನ ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯೂ ಒಂದು.
ಸಾಂಸ್ಕೃತಿಕ ನಗರಿ ಮೈಸೂರಿನ ಸಮಸ್ತ ಜನತೆಗೆ ಒಂದು ಸಂತಸದ ಸುದ್ದಿ. ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ ೭ ಅದ್ಭುತಗಳು’ ಇರುವಂತೆಯೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ ೭ ಅದ್ಭುತ’ ತಾಣಗಳ ಘೋಷಣೆಯಾಗಿದೆ.

ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ ೭ ಅದ್ಭುತ’ಗಳನ್ನು ಉದ್ಘೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.

ನಾಡಿನ ಏಳು ಅದ್ಭುತ ತಾಣಗಳನ್ನು ಏಳು ವಿಭಾಗಗಳ ಅಡಿಯಲ್ಲಿ ಹೆಸರಿಸಲಾಗಿದ್ದು, ಅವು ಇಂತಿವೆ.೧. ಹಿರೇಬೆಣಕಲ್ ಶಿಲಾಸಮಾಧಿಗಳು: ಕ್ರಿ.ಪೂ.೮೦೦ರಿಂದ ೨೦೦ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್ ಶಿಲಾಯುಗದ ಅದ್ಭುತ’ ಎಂದು ಘೋಷಿಸಲಾಗಿದೆ.

೨. ಹಂಪಿ: ೧೪ರಿಂದ ೧೬ನೇ ಶತಮಾನದ ನಡುವೆ ನಿರ್ಮಾಣಗೊಂಡ ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.

೩. ಗೊಮ್ಮಟೇಶ್ವರ: ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಾಗಿರಿಯ ನೆತ್ತಿಯಲ್ಲಿ ೧೦ನೇ ಶತಮಾನದಲ್ಲಿ ಸ್ಥಾಪನೆಯಾದ ೫೭ ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.
೪. ಗೋಲಗುಮ್ಮಟ: ೧೭ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.

೫. ಮೈಸೂರು ಅರಮನೆ: ೧೯-೨೦ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.

೬. ಜೋಗ ಜಲಪಾತ: ಭಾರತದಲ್ಲೇ ಅತಿ ಸುಂದರ ಎನಿಸಿರುವ, ೮೩೦ ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.

೭. ನೇತ್ರಾಣಿ ದ್ವೀಪ: ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.

ಉದ್ಘೋಷಣೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ‘ಕರ್ನಾಟಕದ ಏಳು ಅದ್ಭುತಗಳು’ ಹೊಸ ಪ್ರವಾಸೋದ್ಯಮ ಮಾದರಿಗಳ ಸೃಷ್ಟಿಗೆ ದಿಕ್ಸೂಚಿಯಾಗಲಿವೆ. ಈ ಏಳು ಅಧಿಕೃತ ಅದ್ಭುತಗಳ ಪಟ್ಟಿಯಲ್ಲಿ ಒಂದಾಗಿರುವ ಹಿರೇಬಣಕಲ್ಲು ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಲು ಈಗಾಗಲೇ ಸೂಚಿಸಿದ್ದೇನೆ. ಜತೆಗೆ ಏಳೂ ಅದ್ಭುತಗಳ ಸ್ಥಳದಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ,ನಾನು ಪ್ರವಾಸೋದ್ಯಮ ಸಚಿವನಾದ ಬಳಿಕ ರಾಜ್ಯದ ಸಾಕಷ್ಟು ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅದರ ಜತೆಗೆ ಇನ್ನಷ್ಟು ಕಾರ್ಯಗಳು ಆಗಬೇಕಿದೆ. ಏಳು ಅದ್ಭುತ ತಾಣಗಳ ಸಂರಕ್ಷಣೆ ನಿರಂತರವಾಗಿರಬೇಕು. ಆದರೆ, ನಾವಿನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಗೆ ಹೋಗುತ್ತಿದ್ದೇವೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹೋಗುತ್ತವೆ. ಕಾರ್ಯಾಂಗವು ಈ ತಾಣಗಳ ರಕ್ಷಣೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಈ ಕಾರ್ಯಕ್ಕೆ ಜನತೆ ಸಹಕರಿಸಬೇಕು. ಸರ್ಕಾರ ಯಾವುದೇ ಇರಲಿ ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇಂಥಹ ಹೊಣೆಗಾರಿಕೆ ನಿಭಾಯಿಸುವಲ್ಲಿ ಹಿಂದೆ ಬೀಳಬಾರದು ಎಂದರು.

‘ಕರ್ನಾಟಕದ ೭ ಅದ್ಭುತಗಳು’ ಅಭಿಯಾನದ ರಾಯಭಾರಿ, ಖ್ಯಾತ ನಟ ರಮೇಶ್ ಅರವಿಂದ್ ಮಾತನಾಡಿ,ಕರ್ನಾಟಕದಲ್ಲಿ ನೂರಾರು ಅದ್ಭುತಗಳಿವೆ. ಅವುಗಳಲ್ಲಿ ಏಳನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಿ ಅದ ಮೇಲೆ ಬೆಳಕು ಚೆಲ್ಲುವ ಕೈಂಕರ್ಯಕ್ಕೆ ರಾಯಭಾರಿಯಾಗುವಂತೆ ನನ್ನನ್ನು ಕೇಳಿಕೊಂಡಾಗ ತಕ್ಷಣ ಪ್ರೀತಿಯಿಂದ ಒಪ್ಪಿಕೊಂಡೆ. ಪ್ರತಿವರ್ಷ ವಿಶ್ವ ಸುಂದರಿಯರು ಬದಲಾಗುತ್ತಾರೆ. ಆದರೆ, ಈ ಏಳು ಅದ್ಭುತಗಳೆಂದ ಈ ವಿಶ್ವ ಸುಂದರಿಯರು ನೂರಾರು ವರ್ಷಗಳಿಂದ ಸೌಂದರ್ಯ ಉಳಿಸಿಕೊಂಡಿವೆ. ಸರ್ವ ಕಾಲಕ್ಕೂ ಈ ಸೌಂದರ್ಯ ಹಾಗೇ ಇರಲಿದೆ. ನಮ್ಮನಮ್ಮ ಗ್ರಂಥಗಳಲ್ಲಿ ಸತ್ಯಂ ಶಿವಂ ಸುಂದರಂ ಎಂದು ತಿಳಿಸಿದಂತೆ ಒಂದು ವಿಚಾರ ಶಾಶ್ವತವಾಗಿ ಸುಂದರವಾಗಿರಬೇಕಾದರೆ ಅದರ ಹಿಂದೆ ಸತ್ಯ, ದೈವತ್ವ, ಸತ್ವ ಅಡಗಿರಬೇಕು. ಈ ಏಳು ಅದ್ಭುತಗಳು ನೋಟಕ್ಕೆ ಮಾತ್ರ ಸುಂದರವಾಗಿಲ್ಲ. ಅದರ ಜತೆಗೆ ನಮ್ಮತನ, ನಮ್ಮ ಸಂಸ್ಕೃತಿ , ನಮ್ಮ ಪರಂಪರೆಯನ್ನು  ಪ್ರತಿಬಿಂಬಿಸುಂತ ಸತ್ಯ, ಸತ್ವವನ್ನು ಒಳಗೊಂಡಿವೆ ಎಂದು ಬಣ್ಣಿಸಿದರು.

ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ವಿಜಯಪುರ ಜಿಲ್ಲಾಧಿಕಾರಿ ಮಹಾಂತೇಶ್ ದಾನಮ್ಮನವರ್, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಪರವಾಗಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ವಿಜೇತ ತಾಣಗಳ ಪ್ರಮಾಣಪತ್ರ ಹಾಗೂ ಘೋಷಣಾ ಫಲಕ ಸ್ವೀಕರಿಸಿದರು.ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ‘ಕರ್ನಾಟಕದ ೭ ಅದ್ಭುತಗಳ’ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿದ್ದವು.

website developers in mysore