ಇಂದು ಮೈಸೂರಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ: ನನ್ನನ್ನು ಸ್ವಾಗತಿಸಲು ಯಾರು ಬರೋದು ಬೇಡ ಎಂದ ಸಚಿವ

ಮೈಸೂರು, ಏಪ್ರಿಲ್ 10, 2020 (www.justkannada.in): ಇಂದು ಸಂಜೆ ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ನಂತರ ವಾಸ್ತವ್ಯ ಹೂಡಿ , ನಾಳೆ ಬೆಳಗ್ಗೆ  ಜನಪ್ರತಿನಿಧಿಗಳ ಸಭೆ ನಡೆಸುತ್ತೇನೆ ಎಂದು ಮೈಸೂರು ಜಿಲ್ಲಾ ನೂತನ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ನನ್ನನ್ನು ಸ್ವಾಗತಿಸಲು ಯಾರೂ ಬರುವುದು ಬೇಡ. ಈ ಸಂದರ್ಭದಲ್ಲಿ ನಾನು ಯಾವುದೇ ಪುಷ್ಪಗುಚ್ಛಗಳನ್ನು ಸ್ವೀಕಾರ ಮಾಡುವುದಿಲ್ಲ. ಸಂಬಂಧಪಟ್ಟ  ಅಧಿಕಾರಿಗಳು ಮಾತ್ರ ಇರಬೇಕು. ಎಲ್ಲರೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೋಮಶೇಖರ್ ಹೇಳಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ನನ್ನನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಕ್ಕೆ ಅವರಿಗೆ  ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆಂಬ ವಿಶ್ವಾಸ ನನಗಿದೆ. ಮೈಸೂರು ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಕೊರೋನಾ ಮುಕ್ತವನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಜಿಲ್ಲಾಡಳಿತದಲ್ಲಿರುವ ಯುವ ಹಾಗೂ ದಕ್ಷ ಅಧಿಕಾರಿಗಳ ಸಹಕಾರದಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ.  ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಜಿಲ್ಲೆ ಶೀಘ್ರ ಕೊರೊನಾ ಮುಕ್ತವಾಗಲಿ ಎಂದು ಇದೇ ವೇಳೆ ಆಶೀಸುತ್ತೇನೆ. ಜೊತೆಗೆ ಆ ಭಾಗದ ಹಾಲಿ ಮತ್ತು ಮಾಜಿ ಸಂಸತ್ ಸದಸ್ಯರು, ಶಾಸಕರುಗಳ ಸಹಕಾರ, ಸುತ್ತೂರು ಶ್ರೀಗಳ ಮಾರ್ಗದರ್ಶನ, ಯದುವಂಶದ ಪ್ರಮೋದಾದೇವಿ ಒಡೆಯರ್ ಹಾಗೂ ಯುದುವೀರ ಒಡೆಯರ್ ಹಿಂದಿನ ಉಸ್ತುವಾರಿ ಸಚಿವರಾದ ಸೇರಿದಂತೆ ಮೈಸೂರಿನ ಪ್ರಜ್ಞಾವಂತ ನಾಗರೀಕರು, ಸಂಘ ಸಂಸ್ಥೆಗಳು ಹಾಗೂ ಹಲವು ಪ್ರಮುಖರ ಸಲಹೆ ಸಹಕಾರಗಳ ಮೇರೆಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಬದ್ಧನಿದ್ದೇನೆ ಎಂದು ಹೇಳಿದ್ದಾರೆ.