BIG NEWS : ಕೋವಿಡ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ನೆರವಿಗೆ KSOU ಆರಂಭಿಸಿದೆ ರೇಡಿಯೋ ಪಾಠ..!

ಮೈಸೂರು, ಜು.20, 2020 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ‘ ರೇಡಿಯೋ ಪಾಠ ‘ ಆರಂಭಿಸಿದೆ. ಜತೆಗೆ ಜು. 31 ರ ಬಳಿಕ ಸಂಪೂರ್ಣ ಡಿಜಿಟಲೀಕರಣಗೊಂಡು ವಿದ್ಯಾರ್ಥಿಗಳ ಪ್ರವೇಶಾತಿಯಿಂದ ಹಿಡಿದು ಪ್ರತಿಯೊಂದು ವ್ಯವಸ್ಥೆಯೂ ಆನ್ ಲೈನ್ ಮೂಲಕವೇ ನಡೆಯಲಿದೆ.

ಕೆಎಸ್ಒಯು ಕುಲಪತಿ ಡಾ.ಎಸ್.ವಿದ್ಯಾಶಂಕರ್, ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಿಷ್ಟು…
ವಿದ್ಯಾರ್ಥಿಗಳ ಹಿತ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಮುಕ್ತ ವಿವಿ ಆನ್ ಲೈನ್ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಜತೆಗೆ ಈಗ ಕೋವಿಡ್ ಸಂಕಷ್ಟದ ಸಮಯಬೇರೆ. ಆದ್ದರಿಂದ ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ದಾಪುಗಾಲಿಟ್ಟಿದ್ದೇವೆ. ಜು.31 ರ ಬಳಿಕ ಮುಕ್ತ ವಿವಿ ವ್ಯವಸ್ಥೆ ಸಂಪೂರ್ಣ ಆನ್ ಲೈನ್ ಗೊಳ್ಳಲಿದೆ.

ಆ ಮೂಲಕ ದೂರ ಶಿಕ್ಷಣ ವಿದ್ಯಾರ್ಥಿಗಳು, ಪ್ರವೇಶಾತಿ, ಶುಲ್ಕ ಪಾವತಿ, ಅಧ್ಯಯನ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ಯಾವುದೇ ಕಾರ್ಯಕ್ಕೂ ಮುಕ್ತ ವಿವಿಗೆ ಬರುವುದು ತಪ್ಪುತ್ತದೆ. ದೂರ ಶಿಕ್ಷಣ ವ್ಯವಸ್ಥೆಯ ‘ ರೀಚ್ ದ ನಾನ್ ರೀಚ್ ‘ ಗುರಿ ತಲುಪಬಹುದು ಎಂದರು.

 

ಆನ್ ಲೈನ್ ದಾಖಲು :

ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರವೇಶಾತಿಯ ಜನವರಿ ಸೈಕಲ್ ನಲ್ಲಿ ಈಗಾಗಲೇ 6000 ವಿದ್ಯಾರ್ಥಿಗಳು ಅಡ್ಮಿಷನ್ ಆಗಿದ್ದಾರೆ. ಆ ಮೂಲಕ ಮುಕ್ತ ವಿವಿ ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಿದ್ದ ಆನ್ ಲೈನ್ ಅಡ್ಮಿಷನ್ ಪದ್ಧತಿಗೆ ವಿದ್ಯಾರ್ಥಿಗಳಿಂದ ಪೂರಕ ಬೆಂಬಲ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಮುಕ್ತ ವಿವಿ ಕುಲಪತಿ ಡಾ. ಎಸ್. ವಿದ್ಯಾಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

Mysore-mysuru-KSOU-radio-classes-digitization-online-admission-VC-vidyashankar

ಸ್ಟೂಡೆಂಟ್ ಆ್ಯಪ್ :

ಇದೇ ಮೊದಲ ಬಾರಿ ಕರ್ನಾಟಕ ರಾಜ್ಯ ಮುಕ್ತ ವಿವಿ ಜಾರಿಗೊಳಿಸಿದ್ದ ‘ ಸ್ಟೂಡೆಂಟ್ ಆ್ಯಪ್’ ಗೆ ವಿದ್ಯಾರ್ಥಿ ವಲಯದಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೂರು ತಿಂಗಳ ಹಿಂದೆಯಷ್ಟೆ ಬಿಡುಗಡೆಗೊಂಡ ಈ ಆ್ಯಪ್ ಈಗಾಗಲೇ 12, 000 ಡೌನ್ಲೋಡ್ ಆಗಿದೆ.
ಈ ಆ್ಯಪ್ ಮೂಲಕವೇ ವಿದ್ಯಾರ್ಥಿಗಳಿಗೆ ಪಾಠ ಕೇಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ಮುಕ್ತ ವಿವಿಯ ಜ್ಞಾನವಾಹಿನಿ ಯೋಜನೆಯಡಿ ಪರಿಣಿತ ಪ್ರಾಧ್ಯಾಪಕರಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿತ್ತು. ಈಗ ಆ ಪಾಠದ ಪ್ರವಚನಗಳನ್ನು ಸಂಪೂರ್ಣ ಡಿಜೀಟಲಿಕರಣಗೊಳಿಸಿ ಆ್ಯಪ್ ನಲ್ಲಿ ‘ ರೇಡಿಯೋ ಪಾಠ ‘ ದ ಮೂಲಕ ವಿದ್ಯಾರ್ಥಿಗಳಿಗೆ ಸದುಪಯೋಗವಾಗುವಂತೆ ಮಾಡಲಾಗಿದೆ.
ಇಂತಹ ಸಹಸ್ರಾರು ಪಾಠ ಪ್ರವಚನಗಳನ್ನು ರೆಕಾರ್ಡ್ ಮಾಡಲಾಗಿದ್ದು, ಅವನ್ನೆಲ್ಲಾ ಡಿಜಿಟಲೀಕರಣದ ಮೂಲಕ ರೇಡಿಯೋ ಪಾಠದಲ್ಲಿ ಕೇಳುವಂತೆ ಮಾಡುವ ಗುರಿ ಹೊಂದಲಾಗಿದೆ.

ಗೂಗಲ್ ಪ್ಲೇಸ್ಟೋರ್ ನಲ್ಲಿ ‘ಸ್ಟೂಡೆಂಟ್ ಆ್ಯಪ್ ‘ ಎಂದು ಟೈಪ್ ಮಾಡಿದರೆ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಕೇವಲ ಮುಕ್ತವಿವಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಇತರೆ ಯಾವುದೇ ವಿವಿಯ ವಿದ್ಯಾರ್ಥಿಗಳು ಸಹ ಉಚಿತವಾಗಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಪ್ರಯೋಜನ ಪಡೆಯಬಹುದು ಎಂದು ಕುಲಪತಿ ಡಾ. ಎಸ್.ವಿದ್ಯಾಶಂಕರ್ ತಿಳಿಸಿದರು.

ಸದ್ಯದಲ್ಲೇ ಮುಕ್ತ ವಿವಿಯ ವೆಬ್ ಸೈಟ್ ಹಾಗೂ ಆ್ಯಪ್ ಮೂಲಕ ಲೈವ್ ಪ್ರೋಗ್ರಾಮ್ ಜಾರಿಗೊಳ್ಳಲಿದೆ. ಈ ನಿಟ್ಟಿನಲ್ಲಿ ಅಗತ್ಯ ತಾಂತ್ರಿಕ ಪೂರ್ವ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ooooo

key words : Mysore-mysuru-KSOU-radio-classes-digitization-online-admission-VC-vidyashankar