ನಗು ನಗುತ್ತಲೇ ವೇದಿಕೆ ಹಂಚಿಕೊಂಡ ಶಾಸಕ ಜಿ.ಟಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ನವೆಂಬರ್,9,2021(www.justkannada.in): ಜೆಡಿಎಸ್ ನಿಂದ ದೂರು ಉಳಿದು ಈಗಾಗಲೇ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುಳಿವು ನೀಡಿರುವ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಇದೀಗ ಮಾಜಿ ಸಿಎಂ ಸಿದ್ಧರಾಮಯ್ಯ ಜತೆ ವೇದಿಕೆ ಹಂಚಿಕೊಂಡಿದ್ಧಾರೆ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾಗಿದ್ದ  ಮಾಜಿ ಸಿಎಂ ಸಿದ್ಧರಾಮಯ್ಯ  ಹಾಗೂ ಶಾಸಕ ಜಿಟಿ ಡಿ ದೇವೇಗೌಡ ಒಂದೇ ವೇದಿಕೆಯಲ್ಲಿ ಕಂಡು ಬಂದರು. ಮೈಸೂರಿನ ಹಿನಕಲ್ ನಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ ದೇವೇಗೌಡ ಭಾಗಿಯಾಗಿ ವೇದಿಕೆ ಹಂಚಿಕೊಂಡರು.

ನಗುನಗುತಲೇ ವೇದಿಕೆಯಲ್ಲಿ ಸಿದ್ದರಾಮಯ್ಯ ಹಾಗೂ ಜಿಟಿ ದೇವೇಗೌಡ ಕುಳಿತಿದ್ದು ಕಂಡು ಬಂತು. ಜಿ.ಟಿ ದೇವೇಗೌಡರು  ಜೆಡಿಎಸ್‌ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲು  ಮುಂದಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಇಂದೇ ಸಂದೇಶ ರವಾನಿಸಿದ್ದಾರೆಯೇ ಎನ್ನಲಾಗುತ್ತಿದೆ.

ಈ ಮಧ್ಯೆ ಬಹುತೇಕ ಕಾಂಗ್ರೆಸ್ ನತ್ತ ಮುಖಮಾಡಿದ‌ ಜಿಟಿ ದೇವೇಗೌಡರನ್ನ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.  ಸಿದ್ದರಾಮಯ್ಯ,ಜಿಟಿಡಿ ವೇದಿಕೆಯಲ್ಲಿ ಮಾತುಕತೆ ನಡೆಸಿದ್ದು ಜಿಟಿ ದೇವೇಗೌಡರು ಕಾಂಗ್ರೆಸ್ ಸೇರುವುದನ್ನ ವಿರೋಧಿಸಿದ್ದ ಕೆಲವರು ವೇದಿಕೆಯಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಪ್ರಪಂಚದಲ್ಲಿ ಅತ್ಯುತ್ತಮ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಇದನ್ನ ಎಲ್ಲರೂ ಚಿಂತನೆ ಮಾಡಬೇಕು, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಮತದಾರರು ಜಾಗೃತರಾಗಬೇಕು, ಅಂಬೇಡ್ಕರ್ ಆಶಯದಂತೆ ಬದುಕಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅಂಬೇಡ್ಕರ್ ಧ್ಯೇಯ ಎಂದು ನುಡಿದರು.

ಹಿನಕಲ್ ಗ್ರಾಮ ಬೆಳೆಯುತ್ತಿದೆ. ಇಂತಹ ಪ್ರದೇಶದಲ್ಲಿ ಅಂಬೇಡ್ಕರ್ ಭವನ ಅನಿವಾರ್ಯ. ಸಿದ್ದರಾಮಯ್ಯನ ಕಾಲದಲ್ಲೇ ಅಂಬೇಡ್ಕರ್ ಭವನದ ಉದ್ಘಾಟನೆ ಆಗಿತ್ತು. ಆಗಲೂ ನಾನು ಅವರ ಜೊತೆ ಬಂದು ಉದ್ಘಾಟನೆ ಮಾಡಿದ್ದೆ. ಇದೀಗ ಅದನ್ನ ಮತ್ತಷ್ಟು ಅಭಿವೃದ್ಧಿ ಮಾಡಿ ಮೊದಲ ಮಹಡಿಗೆ ಉದ್ಘಾಟನೆಗೆ ನನ್ನನ್ನ ಆಹ್ವಾನ ಮಾಡಿದರು. ಹಾಗಾಗಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ  ಕಷ್ಟ. ನಾನು ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಮೀಸಲಿಟ್ಟೆ. ನಾನು ಅಧಿಕಾರಕ್ಕೆ ಬರುವ ಮುನ್ನ ಯಾವ ಸರ್ಕಾರಗಳು ಜನಸಂಖ್ಯೆಗನುಗುಣವಾಗಿ ಹಣ ಮೀಸಲಿಟ್ಟಿರಲಿಲ್ಲ‌. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾನೂನು ರೂಪಿಸಿದೆ. ಇಂದಿಗೂ ದೇಶದಲ್ಲಿ ಈ ಕಾನೂನನ್ನ ತಂದಿಲ್ಲ‌. ಫಾರ್ ದಿ ಫಸ್ಟ್ ಟೈಮ್ ಇನ್ ದಿ ಹಿಸ್ಟರಿ ಆಫ್ ಕರ್ನಾಟಕ. ಸಿಎಂ ಆದ ಒಂದು ಗಂಟೆಯೊಳಗೆ ಅಂಬೇಡ್ಕರ್, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮಗಳ ಸಾಲವನ್ನ ಬಡ್ಡಿ ಸಮೇತ ಮನ್ನಾ ಮಾಡಿದೆ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆ ಜಾರಿಗೊಳಿಸಿದೆ. ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಮಂಜುನಾಥ್, ಎಂಎಲ್ಸಿ ಧರ್ಮಸೇನಾ, ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ, ಕಾಂಗ್ರೆಸ್ ಮುಖಂಡ ಮರೀಗೌಡ, ರಾಕೇಶ್ ಪಾಪಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

Key words: mysore-MLA-GT devegowda-Former CM- Siddaramaiah