ವಿಶ್ವನಾಥ್-ಸಾರಾ ಮಹೇಶ್ ಆಣೆ-ಪ್ರಮಾಣ : ನಾಳೆ ಚಾಮುಂಡಿಬೆಟ್ಟಕ್ಕೆ ಮರಮಕಲ್ ಬರ್ತಾರಾ..?

 

ಮೈಸೂರು, ಅ.16, 2019 : (www.justkannada.in news ) : ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಹಾಗೂ ಜೆಡಿಎಸ್ ಶಾಸಕ ಸಾ.ರ.ಮಹೇಶ್ ನಡುವಿನ ಆಣೆ-ಪ್ರಮಾಣದ ಕೇಂದ್ರ ಬಿಂದುವಾಗಿರುವ ಮಲ್ಲಿನಾಥ ರೆಡ್ಡಿ ಮರಮಕಲ್ ನಾಳೆ ಚಾಮುಂಡಿಬೆಟ್ಟಕ್ಕೆ ಬರ್ತಾರ..?

ಇಂಥದ್ದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಬುಧವಾರ ಮೂಡಿತ್ತು. ಕಾರಣ, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಸಾ.ರ.ಮಹೇಶ್, ಮಾಜಿ ಸಚಿವ ವಿಶ್ವನಾಥ್ ಅವರ ಪ್ರಮಾಣದ ಸವಾಲು ಸ್ವೀಕರಿಸಿರುವೆ. ಇದಕ್ಕಾಗಿಯೇ ನಾನು ಕಾಯುತ್ತಿದ್ದೆ. ವಿಶ್ವನಾಥ್ ತಮ್ಮ ಜತೆಗೆ ಮರಮಕಲ್ (ಮೈಸೂರು ಮೂಲದ ಪತ್ರಕರ್ತರು ) ಅವರನ್ನು ಕರೆ ತರಲಿ. ವಿಶ್ವನಾಥ್ ಪ್ರಕರಣದ ಸಂಪೂರ್ಣ ಮಾಹಿತಿ ಮರಮಕಲ್ ಅವರ ಬಳಿ ಇದೆ ಎಂದು ಹೇಳಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಯಾರು ಈ ಮರಮಕಲ್ :

ಗುಲ್ಬರ್ಗ ಮೂಲದ ಮಲ್ಲಿನಾಥ ರೆಡ್ಡಿ ಮರಮಕಲ್ , ಮೂರ್ನಾಲ್ಕು ದಶಕಗಳಿಂದ ಮೈಸೂರಿನ ಪತ್ರಿಕಾರಂಗದಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದ ಹೆಸರು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೈಸೂರು ಆವೃತ್ತಿಯ ಮುಖ್ಯಸ್ಥರಾಗಿ ಬಹುತೇಕ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವರು ಜತೆಗೆ ಚಿರಪರಿಚಿತರು ಹೌದು.
ಕಳೆದ ಮೂರು ವರ್ಷಗಳ ಹಿಂದೆ ಪತ್ರಿಕಾರಂಗವನ್ನು ಅಧಿಕೃತವಾಗಿಯೇ  ತೊರೆದ ಮರಮಕಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ಜತೆಗೆ ಅವರ ಥಿಂಕ್ ಟ್ಯಾಂಕ್ ಆಗಿರುವವರು. ಅಪ್ಪಟ್ಟ ಬಸವಣ್ಣನ ಅನುಯಾಯಿಯಾದ ಮರಮಕಲ್, ದೇವರು-ದಿಂಡರು ಬಗ್ಗೆ ಒಲವಿಲ್ಲ. ದೇವಸ್ಥಾನಕ್ಕೂ ಹೋದವರಲ್ಲ. ಮನೆ ಗೃಹ ಪ್ರವೇಶದ ಸಂದರ್ಭದಲ್ಲೂ ಇದನ್ನೇ ಪಾಲಿಸಿಕೊಂಡು ಬಂದವರು. ಯಾವುದೇ ವೈದಿಕ ಪೂಜೆ-ಪುನಸ್ಕಾರಗಳಿಗೂ ಆಸ್ಪದ ನೀಡದೆ, ಬಸವ ಜಯಂತಿಯಂದು ಹೊಸ ಮನೆ ಪ್ರವೇಶಿಸಿದವರು.
ಇಂಥ ಹಿನ್ನೆಲೆಯಿರುವ ಮರಮಕಲ್ ನಾಳೆ ಚಾಮುಂಡಿಬೆಟ್ಟಕ್ಕೆ ಬರುತ್ತಾರಾ..?

ವಿಶ್ವನಾಥ್ ವಿರುದ್ಧ ಕೋಟಿಗಟ್ಟಲೇ ಹಣ ಪಡೆದ ಆರೋಪ ಮಾಡಿರುವ ಜೆ.ಡಿ.ಎಸ್. ಮಾಜಿ ಸಚಿವ ಸಾ.ರ.ಮಹೇಶ್, ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಮರಮಕಲ್ ಅವರನ್ನು ಕರೆದುಕೊಂಡು ಬಂದು ಅವರ ಸಮ್ಮುಖದಲ್ಲಿ ವಿಶ್ವನಾಥ್ ಹಣ ಪಡೆದಿಲ್ಲ ಎಂಬುದನ್ನು  ಪ್ರಮಾಣ ಮಾಡಲಿ ಎನ್ನುವ ಮೂಲಕ ಮರಮಕಲ್ ಅವರ ಹೆಸರು ಪ್ರಸ್ತಾಪಿಸಿದ್ದರು.

 

key words : mysore-media-chamundhi.hill-maramkal-vishwanath-sa.ra.mahesh