ಮೈಸೂರು ತಾಲೂಕು ಕಚೇರಿಯಲ್ಲೊಂದು ಪವಾಡ : ಸತ್ತ ವ್ಯಕ್ತಿಯೇ ಎದ್ದು ಬಂದು ಮಾಡಿದ ದಾನಪತ್ರ…!

Promotion

 

ಮೈಸೂರು, ಜು.19, 2021 : (www.justkannada.in news ) ಸತ್ತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯ ಜಮೀನು ಕಬಳಿಸುವ ಹುನ್ನಾರದಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ವ್ಯಕ್ತಿ ಹಾಗೂ ದಾಖಲೆಗಳನ್ನ ಸೃಷ್ಟಿಸಿ ಆಸ್ತಿಯನ್ನ ಕಬಳಿಸಿದ ಘಟನೆ ಬೆಳಕಿಗೆ ಬಂದಿದೆ.

ಈ ಅಕ್ರಮವನ್ನು ಸಾಮಾಜಿಕ ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬೆಳಕಿಗೆ ತಂದಿದ್ದಾರೆ. ಅಕ್ರಮದ ಬಗ್ಗೆ ಗ್ರಾಮ‌ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ತಪ್ಪಿತಸ್ಥರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವರದಿ ನೀಡಿದ್ದಾರೆ. ಆದರೂ ಕೋಟ್ಯಾಂತರ ರೂ. ಮೌಲ್ಯದ ಜಮೀನು ಕಬಳಿಸುವ ಸಂಚು ನಡೆಯುತ್ತಲೇ ಇದೆ ಎಂದು ನಾಗೇಂದ್ರ ಆರೋಪಿಸಿದ್ದಾರೆ.
ಹಗರಣದ ಒಟ್ಟಾರೆ ಸಾರಾಂಶವಿಷ್ಟು…

jk

ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮ ಸರ್ವೆ ನಂ.244/2 ರ 4 ಎಕ್ರೆ 4 ಗುಂಟೆ ಜಮೀನು ಇಡುವಳಿ ಜಮೀನಾಗಿದ್ದು ಎ.ಚೆಲುವರಾಜ್. ಆ.ಸೆಲ್ವರಾಜ್ ಎಂಬುವರಿಗೆ ಸೇರಿದ ಸ್ವತ್ತಾಗಿದೆ.ಎ.ಚೆಲುವರಾಜು ಮೈಸೂರಿನ ಎನ್.ಆರ್.ಮೊಹಲ್ಲಾದ ಗಾಣಿಗರ ಬೀದಿ ನಿವಾಸಿ.ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಜಾಮ್ ದಾಳ್ ಗ್ರಾಮದಲ್ಲಿ 28-8-1986 ರಲ್ಲಿ ಮರಣಹೊಂದಿದ್ದಾರೆ. ಇವರ ಹೆಸರಿನಲ್ಲಿರುವ 4 ಎಕ್ರೆ 4 ಗುಂಟೆ ಜಮೀನು ಕಬಳಿಸಲು ಭೂ ಮಾಫಿಯಾ ಭಾರಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
1986 ರಲ್ಲಿ ಮೃತಪಟ್ಟ ಎ.ಚೆಲುವರಾಜ್.ಆ.ಸೆಲ್ವರಾಜ್ 2020 ರಲ್ಲಿ ತಮ್ಮ ಮಗಳು ಲಕ್ಷ್ಮಮ್ಮ ಎಂಬುವರಿಗೆ ದಾನಪತ್ರ ಮಾಡಿದಂತೆ ದಾಖಲೆ ಸೃಷ್ಟಿಯಾಗಿದೆ.1986 ರಲ್ಲಿ ಸತ್ತ ಎ.ಚೆಲುವರಾಜ್ 2019 ರಲ್ಲಿ ಬಂದು ದಾಖಲೆಗಳಿಗೆ ಹೆಬ್ಬೆಟ್ಟಿನ ಗುರುತು ಹಾಗೂ ಸಹಿ ಹಾಕಿದಂತೆ ದಾಖಲೆಗಳು ಸೃಷ್ಟಿಯಾಗಿದೆ.ಈ ದಾಖಲೆಗಳಿಗೆ ಮೈಸೂರು ತಾಲೂಕಿನ ಭೂಮಾಪಕರು ಧೃಢೀಕರಿಸಿದ್ದು ಗ್ರಾಮಸಹಾಯಕ ಸಾಕ್ಷಿಯಾಗಿದ್ದಾರೆ.

ದಾನಪತ್ರದ ವೇಳೆ ಎ.ಚೆಲುವರಾಜ್ ಎಂದು ಹಾಜರುಪಡಿಸಿರುವ ಆಧಾರ್ ಕಾರ್ಡ್ ನಲ್ಲಿ ತಂದೆ ಹೆಸರು ಅಮಲದಾಸ್ ಎಂದು ತಿದ್ದುಪಡಿ ಮಾಡಿರುವುದು ಕಂಡುಬಂದಿದೆ. ದಾನಪತ್ರದಲ್ಲಿ ಎ.ಚೆಲುವರಾಜ್ ಮಾಡಿರುವ ಸಹಿಗಳಲ್ಲಿ ವ್ಯತ್ಯಾಸಗಳಿವೆ. 2019 ರಲ್ಲಿ RTC ತಿದ್ದುಪಡಿ ಮಾಡಲಾಗಿದ್ದು ಹಲವಾರು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಮೈಸೂರು ತಾಲೂಕು ಕಚೇರಿಯಲ್ಲಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ದಾನಪತ್ರ ವೇಳೆ ಎ.ಚೆಲುವರಾಜ್ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಲಕ್ಷ್ಮಮ್ಮ ಹಾಗೂ ಸಾವಿತ್ರಮ್ಮ ನನ್ನ ಮಗಳು ಎಂದು ಉಲ್ಲೇಖಿಸಿರುವ ಅಂಶವೂ ಅನುಮಾನಕ್ಕೆ ಕಾರಣವಾಗುತ್ತಿದೆ. ಅಲ್ಲದೆ 2019 ರಲ್ಲಿ ಜಮೀನು ಪೋಡಿಯಾಗಿರುವುದು ಮತ್ತಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

20-1-2020ರಲ್ಲಿ ಲಕ್ಷ್ಮಮ್ಮ ಹೆಸರಿಗೆ ದಾನಪತ್ರ ನೊಂದಣಿಯಾಗಿದೆ,14-8-2020 ರಲ್ಲಿ ಲಕ್ಷ್ಮಮ್ಮ ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ತಂದೆ ಹೆಸರು ಜಯರಾಮು ಎಂದು ನಮೂದಾಗಿದೆ. ಆದರೆ ದಾನಪತ್ರದಲ್ಲಿ ಎ.ಚೆಲುವರಾಜು ಎಂದು ಸ್ವಯಂ ಧೃಢೀಕರಣ ಮಾಡಲಾಗಿದೆ.ಒಬ್ಬ ವ್ಯಕ್ತಿಗೆ ಇಬ್ಬರು ತಂದೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಇಲ್ಲಿ ಮೂಡಿದೆ. ಅಲ್ಲದೆ ಲಕ್ಷ್ಮಮ್ಮ ರವರ ಖಾಯಂ ವಿಳಾಸ ಗಳು ಬದಲಾಗಿದೆ.ಎರಡು ದಾಖಲೆಗಳಲ್ಲಿ ಎರಡು ಖಾಯಂ ವಿಳಾಸ ನಮೂದಿಸಲಾಗಿದೆ.

ಈ ಹಿಂದೆ ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ಅಕ್ರಮದ ಬಗ್ಗೆ ವರದಿ ನೀಡಿದ್ದಾರೆ.ಎ.ಚೆಲುವರಾಜ್ ಮರಣಹೊಂದಿದ್ದಾರೆಂದು ತಿಳಿಸಿದ್ದರೂ 12-11-2020 ರಂದು ಎ.ಚೆಲುವರಾಜ್ ಖುದ್ದು ಹಾಜರಾಗಿ ಭೂ ಕಂದಾಯ ಪಾವತಿಸಿದ್ದಾರೆಂದು ಇಂದಿನ ಗ್ರಾಮ ಲೆಕ್ಕಿಗರು ಧೃಢೀಕರಿಸಿದ್ದಾರೆ.

ದಾನಪತ್ರದ ಬಗ್ಗೆ ಹಲವಾರು ಅನುಮಾನಗಳು ಉದ್ಭವಿಸಿದ್ದು ಅಂದಿನ ಸಿದ್ದಲಿಂಗಪುರ ವೃತ್ತದ ಗ್ರಾಮಲೆಕ್ಕಿಗ ಎಸ್.ಭಾಸ್ಕರ್ ವರದಿ ನೀಡಿ, ಎ.ಚೆಲುವರಾಜ್ ಮರಣಹೊಂದಿದ್ದು, ಭೂಮಿ ಕಬಳಿಸುವ ಉದ್ದೇಶದಿಂದ ಅಕ್ರಮ ಎಸಗಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಉಲ್ಲೇಖಿಸಿದ್ದಾರೆ. ಇದನ್ನ ರಾಜಸ್ವ ನಿರೀಕ್ಷಕ ಪ್ರಶಾಂತ್ ಎತ್ತಿಹಿಡಿದಿದ್ದು ಖಾತೆದಾರರಿಗೂ ಜಮೀನು ವಹಿವಾಟು ನಡೆಸಿದವರಿಗೂ ಯಾವುದೇ ಸಂಬಂಧವಿರುವುದಿಲ್ಲವೆಂದು ವರದಿ ನೀಡಿದ್ದಾರೆ. ಇದನ್ನ ಪರಿಗಣಿಸಿದರೆ ಲಕ್ಷಮ್ಮ ಎಂಬುವರ ಹೆಸರಿನಲ್ಲಿರುವ ದಾನಪತ್ರ ಬೋಗಸ್ ಆಗಿರುತ್ತದೆ.

jk

ಈ ನಡುವೆ, ಎ.ಚೆಲುವರಾಜ್ .ಆ.ಸೆಲ್ವರಾಜ್ ವಂಶಸ್ಥರು ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್ ಗೆ ಈ ಅಕ್ರಮದ ಬಗ್ಗೆ ದೂರು ಸಲ್ಲಿಸಿದ್ದಾರೆ.

ಮೇಲ್ನೋಟಕ್ಕೆ ಬೋಗಸ್ :

ಈ ಭೂ ಅಕ್ರಮದ ಬಗ್ಗೆ ಮೈಸೂರು ತಾಲೊಕು ತಹಸೀಲ್ದಾರ್ ರಕ್ಷಿತ್ ಅವರನ್ನು ಜಸ್ಟ್ ಕನ್ನಡ ಮಾತನಾಡಿಸಿದಾಗ ಅವರು ಹೇಳಿದಿಷ್ಟು…
ಬೋಗಸ್ ದಾಖಲೆಗಳನ್ನು ಸೃಷ್ಠಿಸಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಾನಪತ್ರ ವಜಾಗೊಳಿಸಿ, ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ಹೀಯರಿಂಗ್ ಮುಗಿದಿದೆ. ಸದ್ಯದಲ್ಲೇ ಇದು ಅಂತಿಮಗೊಳ್ಳಲಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ನಿಜವಾರಸುದಾರು ಇದಲ್ಲಿ ಅವರಿಗೆ ಹಸ್ತಾಂತರಿಸಲಾಗುವುದು, ಇಲ್ಲದಿದ್ದಲ್ಲಿ ಸರಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದರು.

 

0000

key words: mysore-land-mafia-illegal-taluk-office-mysuru