ವಿದ್ಯಾರ್ಥಿಗಳ ಪ್ರವೇಶಾತಿಯೇ ಕುಸಿದಿರುವಾಗ ಬೋಧಕರ ಹುದ್ದೆ ಭರ್ತಿಗೆ ತರಾತುರಿ ಯಾಕೆ : KSOU ವಿಶ್ರಾಂತ ಕುಲಪತಿಗಳ ಆಕ್ಷೇಪ.

 

ಮೈಸೂರು, ಆ.06, 2021 :(www.justkannada.in news) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ತರಾತುರಿಯಲಿ ಜಾಹಿರಾತು ನೀಡಿ ತಾತ್ಕಾಲಿಕ ಬೋಧಕರ ಹುದ್ದೆ ಭರ್ತಿಗೆ ಮುಂದಾಗಿರುವುದು ಈಗ ವಿವಾದಕ್ಕೆ ಎಡೆಮಾಡಿದೆ.

ವಿವಿಯ 24 ವಿಭಾಗಗಳಿಗೆ ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರನ್ನು (60 ಹುದ್ದೆ ) ನೇರ ಸಂದರ್ಶನದ ಮೂಲಕ ನೇಮಿಸಲು ಮುಕ್ತ ವಿವಿ ಮುಂದಾಗಿದೆ . ಈ ಸಂಬಂಧ ಜುಲೈ 28ರಂದು ನೇಮಕಾತಿ ಅಧಿಸೂಚನೆ ಹೊರಡಿಸಿ, 5 ದಿನಗಳ ಬಳಿಕ ಅಂದ್ರೆ ಆ.2 ರಂದು ಮೈಸೂರಿನ ಸ್ಥಳೀಯ ಪತ್ರಿಕೆಗೆ ಜಾಹೀರಾತು ನೀಡಿರುವುದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.

ಜತೆಗೆ ಆ. 10 ರಿಂದಲೇ ನೇರ ಸಂದರ್ಶನ ನಿಗದಿ ಪಡಿಸಿದ್ದು , ಸ್ಥಳವನ್ನು ವೆಬ್‌ಸೈಟ್‌ನಲ್ಲಿ 9ರಂದು ಪ್ರಕಟಿಸುವುದಾಗಿ ಹೇಳಿದೆ. ಮುಕ್ತ ವಿವಿಯ ಈ ತರಾತುರಿಗೆ ಉದ್ಯೋಗಾಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಎಡೆಮಾಡಿದೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯ ವಿಶ್ರಾಂತ ಕುಲಪತಿಗಳಾದ ಡಾ.ಎನ್.ಎಸ್.ರಾಮೇಗೌಡ , ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಪ್ರೊ.ಶಿವಲಿಂಗಯ್ಯ ಅವರು ವಿವಿ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಟ್ಟಾರೆ ಅವರು ಹೇಳಿದಿಷ್ಟು..

ರಾಜ್ಯವ್ಯಾಪಿ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯ ಸ್ಥಳೀಯವಾದ ಒಂದು ದಿನಪತ್ರಿಕೆಗೆ ಮಾತ್ರ ಜಾಹೀರಾತು ನೀಡಿದ್ದು ತಪ್ಪು. ನೇಮಕಾತಿಯಲ್ಲಿ 2018ರ ಯುಜಿಸಿ ಮಾನದಂಡ ಉಲ್ಲಂಘನೆಯಾಗಿದೆ. ಇದರ ಅನ್ವಯ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಬೇಕು. ಹುದ್ದೆಗಳ ಸಂಖ್ಯೆ, ಮೀಸಲಾತಿ ವಿವರಗಳನ್ನು ಪ್ರಕಟಿಸಬೇಕು. ಆದರೆ ಪ್ರಸ್ತುತ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ವರ್ಗೀಕರಿಸಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಮಾನದಂಡ ಪರಿಶೀಲಿಸಿ, ಪಟ್ಟಿ ಮಾಡಿ ಸಂದರ್ಶನಕ್ಕೆ ಆಹ್ವಾನಿಸಿಲ್ಲ. ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿರುವ ವಿಭಾಗಗಳಿಗೂ ನೇಮಕ ಮಾಡಲು ಹೊರಟಿರುವುದು ಯಾವ ಕಾರಣಕ್ಕೆ..?

ಎಲ್ಲಕ್ಕಿಂತ ಪ್ರಮುಖವಾಗಿ ಪ್ರಸ್ತುತ ವಿದ್ಯಾರ್ಥಿಗಳ ಪ್ರವೇಶಾತಿಯೇ ಕುಂಠಿತಗೊಂಡಿದೆ. ಈ ಹಿಂದೆ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಕ್ತ ವಿವಿಗೆ ದಾಖಲಾಗುತ್ತಿದ್ದರು. ಆಗ ಬೋಧಕ ಸಿಬ್ಬಂದಿ ವರ್ಗದ ಒಟ್ಟು ಸಂಖ್ಯೆ 80 ರಷ್ಟಿತ್ತು. ಆಗಲೇ ಬೋಧಕ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ನಿವೃತ್ತ ನ್ಯಾ.ಭಕ್ತವತ್ಸಲ ಕಮಿಟಿ ವರದಿ ನೀಡಿತ್ತು. ಈಗ ವಿದ್ಯಾರ್ಥಿಗಳ ಪ್ರವೇಶಾತಿ ಅಂದಾಜು ಸರಿ ಸುಮಾರು 10 ಸಾವಿರ ಕ್ಕೆ ಕುಸಿದಿದೆ. ಆದರೆ ಬೋಧಕ ವೃಂದದವರು ಮಾತ್ರ ಅಷ್ಟೆ ಇದ್ದಾರೆ. ಇದರ ಜತೆಗೆ ಈಗ ಮುಕ್ತ ವಿವಿ ಮತ್ತೆ ಹೆಚ್ಚುವರಿಯಾಗಿ 60 ಮಂದಿ ಬೋಧಕ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿರುವುದು ಸಮಂಜಸವಲ್ಲ.

ಒಂದು ವೇಳೆ ಯುಜಿಸಿ ಸೂಚನೆಯಂತೆ ನೇಮಕ ಮಾಡುವುದೇ ಆದರೆ, ಅದೇ ಯುಜಿಸಿ ಮಾನದಂಡದಂತೆ ಅರ್ಜಿ ಕರೆದು, ಹುದ್ದೆ ಸಂಖ್ಯೆ, ಮೀಸಲಾತಿ ನಿಗಧಿಪಡಿಸಿ ಅರ್ಹರನ್ನು ನೇಮಕ ಮಾಡಬೇಕೇ ಹೊರತು, ಈ ರೀತಿ ನಿಯಮ ಉಲ್ಲಂಘಿಸಿ ನೇರ ನೇಮಕ ಮಾಡುವುದಲ್ಲ.
ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಂತೆಯೇ ಇಲ್ಲ. ಕೇವಲ ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಿಕೊಳ್ಳಬಹುದು. ಅದು 6 ತಿಂಗಳ ಕಾಲಾವಧಿಗೆ ಮಾತ್ರ. ರಾಜ್ಯದ ಇತರೆ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಪಾಲಿಸುತ್ತಿರುವುದು ಇದನ್ನೇ. ಆದರೆ ಕೆಎಸ್ಒಯು ಮಾತ್ರ ಈ ನಿಮಯ ಉಲ್ಲಂಘಿಸಿ, ಮೂರು ವರ್ಷಗಳ ಅವಧಿಗೆ ಹೇಗೆ ತಾನೇ ನೇಮಕ ಮಾಡಿಕೊಳ್ಳಲು ಸಾಧ್ಯ..? ಎಂದು ಪ್ರಶ್ನಿಸಿದ್ದಾರೆ.

 

————-
key words : Mysore-KSOU-teaching-faculty-direct-appointment-controversy-vice.chancellors-opposed