ವಿದ್ಯಾರ್ಥಿನಿ ಮೇಲಿನ ಅತ್ಯಚಾರ ಪ್ರಕರಣ : ‘ ಕ್ಷೇತ್ರ ರಕ್ಷಣೆ’ ಗೆ ಮುಂದಾದ ಶಾಸಕ ಎಸ್.ಎ.ರಾಮದಾಸ್

 

ಮೈಸೂರು, ಆ.26, 2021 : (www.justkannada.in news) : ನಗರದ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕ್ಕಚಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇಂದು ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಿ, ನಾಳೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಕಳೆದ ಕೆಲ ದಿನಗಳಿಂದ ಮೈಸೂರು ನಗರದಲ್ಲಿ ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇವೆ. ಒರ್ವ ಅಮಾಯಕನನ್ನು ಬಲಿ ತೆಗೆದುಕೊಂಡ ಚಿನ್ನದಂಗಡಿ ದರೋಡೆ ಪ್ರಕರಣ, ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸಳೆದಿತ್ತು. ಜತೆಗೆ ಕೆಲ ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಕೈಗಳನ್ನು ಭೀಕರವಾಗಿ ಕತ್ತರಿಸಿ ಒರ್ವನ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಎಲ್ಲಾ ಘಟನೆಗಳು ಸಾಂಸ್ಕೃತಿಕ ನಗರಿ ಮೈಸೂರಿನ ವರ್ಚಸ್ಸಿಗೆ ಕಪ್ಪುಮಸಿ ಬಳಿದಂತಾಗಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಸರಕಾರಕ್ಕೆ ಚುರುಕು ಮುಟ್ಟಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಗೃಹ ಸಚಿವರು ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆಗೆ ಮುಂದಾಗಿದ್ದಾರೆ. ಸಚಿವ ಅರಗ ಜ್ಞಾನೇಂದ್ರ ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ, ಇಂದು ಸಂಜೆ ಮೈಸೂರಿಗೆ ಆಗಮಿಸಿ ನಾಳೆ ದಿನವೀಡಿ ಮೈಸೂರಲ್ಲೇ ಇದ್ದು ಅಧಿಕಾರಿಗಳ ಸಭೆ ನಡೆಸುವರು.

ಈ ನಡುವೆ, ಅಹಿತಕರ ಘಟನೆಗಳೆರೆಡು ಸಂಭವಿಸಿದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ತುರ್ತು ಕ್ರಮಕ್ಕೆ ಮುಂದಾಗಿರುವುದು ವಿಶೇಷ. ಪ್ರಕರಣ ಗಂಭೀರತೆ ಅರಿತ ರಾಮದಾಸ್, ಇಂದೇ ಪೊಲೀಸ್ ಅಧಿಕಾರಿಗಳ ಸಭೆಗೆ ಸಮಯ ನಿಗಧಿ ಮಾಡಿದ್ದಾರೆ. ಶಾಸಕ ರಾಮದಾಸ್ ಅವರ ನೇತೃತ್ವದಲ್ಲಿ ಕೆ.ಆರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಪೊಲೀಸ್ ಠಾಣಾ ಅಧಿಕಾರಿಗಳ ಸಭೆ ಇಂದು ಸಂಜೆ 5 ಕ್ಕೆ ನಡೆಯಲಿದೆ.

ವಿದ್ಯಾರಣ್ಯಪುರಂನ ಶಾಸಕರ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕೆ.ಆರ್.ಕ್ಷೇತ್ರದ ಎಲ್ಲಾ ಠಾಣೆಗಳ ಅಧಿಕಾರಿಗಳು ಹಾಗೂ ಕೆ.ಆರ್ ಕ್ಷೇತ್ರದ ಎಸಿಪಿ ಹಾಜರಿರುವರು.

key words : mysore-krishnaraja-mla-ramadas-police-meeting-home.minister