ಮತಾಂತರ ನಿಷೇಧ ಕಾಯ್ದೆ ಬಿಲ್ ಹರಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ಆರ್ಥಿಕ ಸಬಲರಿಗೆ ಮೀಸಲಾತಿ ನಿಲ್ಲಬೇಕು ಎಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

kannada t-shirts

ಮೈಸೂರು,ಸೆಪ್ಟಂಬರ್,16,2022(www.justkannada.in): ಕಾಂಗ್ರೆಸ್ ನ ಕೆಲ ನಾಯಕರು ಮತಾಂತರ ಕಾಯ್ದೆ ಬಿಲ್ ನ್ನು ಹರಿದು ಹಾಕಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ಸೋನಿಯಾ, ರಾಹುಲ್ ಗಾಂಧಿಗೆ ಸಂತೃಪ್ತಿ  ಪಡಿಸಿಬೇಕೆಂದು ಬಿಲ್ ಅನ್ನು ಹರಿದು ಹಾಕಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಹಿಂದುಳಿದ, ದಲಿತ, ಬಡವರಿಗೆ ಆಸೆ, ಆಮಿಷ ತೋರಿಸಿ ಮತಾಂತರವಾಗುತ್ತಿರುವುದು ನಡೆಯುತ್ತಿದೆ. ದೇಶದ ವೋಟಿಂಗ್ ಸಮೀಕ್ಷೆಯಲ್ಲಿ  ಮತಾಂತರ ವಾಗುತ್ತಿರುವುದು ಗೊತ್ತಾಗುತ್ತಿದೆ. ಕಡು ಬಡವರಿಗೆ ಆಮಿಷ ತೋರಿಸಿ ಮತಾಂತರ ನಡೆಸುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ಮತಾಂತರವಾದರೆ ತಪ್ಪೇನಿಲ್ಲ. ನೆನ್ನೆ ನಡೆದಿದ್ದು ಚಾರಿತ್ರಿಕ ಸನ್ನಿವೇಶ. ಈ ವಿಧೇಯಕ ಅಂಗಿಕಾರವಾಗಿರುವುದು ಇತಿಹಾಸ ಸೃಷ್ಟಿ ಮಾಡಿದಂತೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ವಾಗಿದೆ ಎಂದು ಕಿಡಿಕಾರಿದರು.

ಬೆಟ್ಟದ ಕುರುಬ ಸಮುದಾಯವನ್ನ ಎಸ್‌ ಟಿಗೆ ಸೇರಿಸುವ ಕೇಂದ್ರದ ತೀರ್ಮಾನ ಸಂತೋಷ.

ಬೆಟ್ಟದ ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸುವ ಕೇಂದ್ರದ ತೀರ್ಮಾನ ಸಂತೋಷ. 3 ದಶಕಗಳ ಹೋರಾಟ ಇದಾಗಿತ್ತು.ಸಮುದಾಯ ಮಠಾಧೀಶರುಗಳಿಂದ ಎಸ್‌. ಟಿಗೆ ಸೇರಿಸಬೇಕೆಂಬ ಹೋರಾಟ ನಡೆದಿತ್ತು.ಇದರಿಂದ ಗಡಿಭಾಗದ ಬಡವರಿಗೆ ಅನುಕೂಲ ಆಗುತ್ತೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಕುಲಶಾಸ್ತ್ರ ಅಧ್ಯಯನ ಮುಂದುವರಿದಿದೆ. ಅದರಲ್ಲಿ ಬರುವ ವರದಿ ಆಧರಿಸಿ ಬಡವರನ್ನು ಮೀಸಲಾತಿ ವರ್ಗಕ್ಕೆ ಸೇರಿಸಬೇಕು. ಸ್ವತಂತ್ರ ಅಮೃತ ಮಹೋತ್ಸವದಲ್ಲಿ ಶ್ರೀಮಂತರೇ ಮೀಸಲಾತಿ ಪಡೆಯುತ್ತಿದ್ದಾರೆ. ಕಡು ಬಡವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಎಲ್ಲಾ ವರ್ಗದಲ್ಲೂ ಆರ್ಥಿಕವಾಗಿ ಸಬಲರಾಗಿವವರಿಗೆ ಮೀಸಲಾತಿ ನಿಲ್ಲಬೇಕು.

ಎಲ್ಲಾ ವರ್ಗದಲ್ಲೂ ಆರ್ಥಿಕವಾಗಿ ಸಬಲರಾಗಿವವರಿಗೆ ಮೀಸಲಾತಿ ನಿಲ್ಲಬೇಕು. ಮೀಸಲಾತಿ ಹಿಂದುಳಿದ, ಕಡು ಬಡವ ದಲಿತರಿಗೆ ಸಿಗುವಂತಾಗಬೇಕು. ಮಲ್ಲಿಕಾರ್ಜುನ ಖರ್ಗೆ ಅಂತವರು ಹಿಂದಿನಿಂದಲೂ ಮೀಸಲಾತಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಈಗ ಅವರ ಮಗನು ಕೂಡ ಮೀಸಲಾತಿ ಅನುಭವಿಸುತ್ತಿದ್ದಾರೆ. ಎಲ್ಲಾ ಪಕ್ಷಗಳಲ್ಲೂ  ಈ ರೀತಿಯ ಪರಿಸ್ಥಿತಿ  ಇದೆ. ಬಹುತೇಕ ದಲಿತ ನಾಯಕರು ಮೀಸಲಾತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದು ಸರಿಯಾಗಬೇಕು. ಆದರೂ ಕಡು ಬಡವನಿಗೆ ಮೀಸಲಾತಿ ಸಿಗುವ ನಿಟ್ಟಿನಲ್ಲಿ ರಾಜಕೀಯ ಮೀಸಲಾತಿ ದೊರೆಯುವಂತಾಗಬೇಕು. ಹಿಂದುಳಿದ ವರ್ಗದವನಾಗಿ ನಾನು ಯಾವುದೇ ಮೀಸಲಾತಿ ಪಡೆಯದೇ ಸಾಮಾನ್ಯ ವರ್ಗದಿಂದ ಗೆದ್ದು ಬಂದಿದ್ದೇನೆ. ಪಕ್ಷದ ನನಗೆ ಅಂತಹ ಅಧಿಕಾರ ಬಂದರೆ ಮೀಸಲಾತಿ ಪಡೆದು ಸಬಲರಾಗಿರುವ ನಾಯಕರಿಗೆ ಟಿಕೆಟ್ ರದ್ದು ಮಾಡುತ್ತೇನೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಇಡಿ  ನೋಟಿಸ್ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ವ್ಯಂಗ್ಯವಾಡಿದ ಕೆ ಎಸ್ ಈಶ್ವರಪ್ಪ, ಭಾರತ್ ಜೋಡೊ ಯಾತ್ರೆಯ ಸಿದ್ದತೆಯಲ್ಲಿರುವಾಗ, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಇಡಿ ನೋಟಿಸ್ ನೀಡಿರುವುದಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಡಿ ಕೆ ಶಿವಕುಮಾರ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ಬೇಲ್ ಮೇಲ್ ಹೊರಗಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿಯ ಹೇಳಿಕೆ ನೀಡಬಾರದು ಎಂದರು.

ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನ

ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ‌‌ನೀಡಿದೆ. ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು. ನನಗೆ ಕ್ಲೀನ್ ಚಿಟ್ ಸಿಕ್ಕನಂತರ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನವಾಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಇಂಧನ ಇಲಾಖೆಯ ಅವ್ಯವಹಾರ ಕುರಿತು ಹಳೆಯ ಕಡತಗಳನ್ನು ಪರಿಶೀಲನೆ ಮಾಡುತ್ತಿರುವುದಕ್ಕೆ ಡಿಕೆಶಿಯಿಂದ ಆಕ್ಷೇಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಅವು ಸಾರ್ವಜನಿಕ ದಾಖಲೆಗಳಾಗಿವೆ. ಯಾರು ಬೇಕಾದರೂ ದಾಖಲೆಗಳನ್ನು ಪಡೆಯಬಹುದು. ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಿ ಯಾರು ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು. ಯಾರ‌ ಮೇಲೂ ಒತ್ತಡ ಹಾಕಿ ಕಡತಗಳನ್ನು ಪಡೆಯುವುದಿಲ್ಲ. ನಾನು ಇಂಧನ ಸಚಿವನಾಗಿದ್ದಾಗಲೂ ಇದೇ ರೀತಿ ಕಡತಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಡಿಕೆಶಿ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರು.

Key words: mysore-former Minister-KS Eshwarappa-congress

website developers in mysore