ಕೆಆರ್ ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆಗೆ ಬಡಗಲಪುರ ನಾಗೇಂದ್ರ ಒತ್ತಾಯ.

ಮೈಸೂರು,ಜೂನ್,25,2021(www.justkannada.in):  ಕೆ.ಆರ್‌.ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ ಬಡಗಲಪುರ ನಾಗೇಂದ್ರ,  ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬಿನ ಬೆಳೆಯ ರಕ್ಷಣೆಗೆ ಮುಂದಾಗಬೇಕು. ಮಂಡ್ಯ ಜಿಲ್ಲೆಯಾದ್ಯಂತ ಕಬ್ಬಿನ ಬೆಳೆ ಒಣಗುತ್ತಿದೆ. ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿದ್ದರೂ ಇದುವರೆಗೂ ಬಿಡುಗಡೆ ಮಾಡಿಲ್ಲ. ಪರಿಣಾಮ ಬೆಳೆದು ನಿಂತಿರುವ ಕಬ್ಬು ಒಣಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಇದೀಗ 90 ಅಡಿಗೇರಿದೆ. ಹಾಗಾಗಿ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಅಹೋರಾತ್ರಿ ಧರಣಿ ಪ್ರತಿಭಟನೆ ‌ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆ‌.ಆರ್‌.ಎಸ್ ಜಲಾಶಯವನ್ನು ಆಶ್ರಯಿಸಿರುವ ಭಾಗದ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಾಗಿದೆ. ನಿರೀಕ್ಷಿತ  ಮಳೆಯಾಗದ ಪರಿಣಾಮ ಕೆರೆ ಕಟ್ಟೆಗಳು ಒಣಗಲಾರಂಭಿಸಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಾಗಾಗಿ ಕೆ.ಆರ್‌‌.ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಿ ಕೆರೆ ಕಟ್ಟೆಗಳನ್ನು ತುಂಬಿಸಲು ಅನುಕೂಲ ಮಾಡಿಕೊಡಬೇಕು ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಕಬ್ಬು ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಿದೆ. ಸರ್ಕಾರ ಕಬ್ಬಿಗೆ ವೈಜ್ಞಾನಿಕ ದರ ನಿಗಧಿ ಪಡಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಬೇಕು. ಕಬ್ಬು ಸಾಗಣೆ ಮಾಡಿರುವ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾಗಿರುವ ಬಾಕಿ ಹಣದ ಪಾವತಿಗೆ ಮುಂದಾಗಬೇಕು. ಕಟಾವಿಗೆ ಬಂದಿರುವ ಕಬ್ಬನ್ನು ಅರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಡಗಲಪುರ ನಾಗೇಂದ್ರ ಹೇಳಿದರು.

Key words: mysore- farmer leader- Badalepura Nagendra- demands -release -water – KRS reservoir