ಐತಿಚಂಡ ರಮೇಶ್ ಉತ್ತಪ್ಪ ಅವರ ನೂತನ ಕೃತಿ `ಅಭಿಮನ್ಯು ದಿ ಗ್ರೇಟ್’

mysore-elephant-story-dasara-jamboo-book

 

ಮೈಸೂರು, ಸೆ.29, 2021 : (www.justkannada.in news ) ವನ್ಯಜೀವಿ ಸಪ್ತಾಹದ ವಿಶೇಷ ಕೊಡುಗೆಯಾಗಿ ಮುಂದಿನ ವಾರ ಹೊರ ಬರಲಿರುವ ಲೇಖಕ ಹಾಗೂ ಸಾಹಿತಿ, ವಿಜಯ ಕರ್ನಾಟಕ ಪತ್ರಿಕೆಯ ಮೈಸೂರು ಮುಖ್ಯ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಅವರ ನಾಲ್ಕು ಕೃತಿಗಳಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಮತ್ತೊಂದು ಕೃತಿ `ಅಭಿಮನ್ಯು ದಿ ಗ್ರೇಟ್’.

`ಅಭಿಮನ್ಯು’ ಅರಣ್ಯ ಇಲಾಖೆಯ, ಅಷ್ಟೇ ಏಕೆ ರಾಜ್ಯದ ಆನೆ ರಾಯಭಾರಿ. ದೇಶ ವಿದೇಶದಲ್ಲಿಯೂ ಈತ ಖ್ಯಾತಿ ಗಳಿಸಿದ್ದಾನೆ. ಯಾವ ಆನೆಗೂ ಇಲ್ಲದ ಗುಣ ವಿಶೇಷಗಳಿವೆ. ಈತನ ಬಗ್ಗೆ ಎಲ್ಲರಿಗೂ ತಣಿಯದ ಕುತೂಹಲ. ಆನೆಯೊಂದು ಈ ಪರಿಯಲ್ಲಿ ಜನರಿಗೆ ಆಪ್ತವಾಗಬಹುದೇ ಎನ್ನುವಷ್ಟು ಅಚ್ಚರಿ ಮೂಡಿಸಿದ್ದಾನೆ. ಈತ ಆನೆ, ಹುಲಿ ಕಾರ್ಯಾಚರಣೆ, ಅಂಬಾರಿ ಹೊರುವುದಕ್ಕಷ್ಟೇ ಸೀಮಿತವಾಗಿಲ್ಲ. ಮನುಷ್ಯರ ಭಾವನೆಯನ್ನು ಅರ್ಥ ಮಾಡಿಕೊಳ್ಳಬಲ್ಲದ್ದು. ಅದರಲ್ಲಿಯೂ ಅಭಿಮನ್ಯು ಹಾಗೂ ಮಾವುತ ವಸಂತನ ಸಂಬಂಧವಿದೆಯಲ್ಲ; ಅದು ಆನೆ-ಮಾನವ ಎಂಬ ಭೇದವನ್ನೇ ಬದಿಗಿರಿಸಿದೆ. ಇವರಿಬ್ಬರು ಬಾಲ್ಯದ ಗೆಳೆಯರು. ಕಣ್ಣಿನಲ್ಲಿಯೇ ಪರಸ್ಪರ ಮಾತನಾಡಿಕೊಳ್ಳುವಷ್ಟು ಆಪ್ತರು. ಇವರಿಬ್ಬರು ಮುಂದಡಿಯಿಟ್ಟರೆ ಎಂತಹ ಕಾರ್ಯಾಚರಣೆಯಲ್ಲಿಯೂ ಹುಲಿ, ಕಾಡಾನೆಗಳ ಹೆಡೆಮುರಿ ಕಟ್ಟಬಲ್ಲರು. ಇವರಿಗೆ ಇವರೇ ಸಾಟಿ.

ಹಾಗಾದರೆ ಈ ಅಭಿಮನ್ಯುವಿನಲ್ಲಿರುವ ವಿಶೇಷ ಗುಣಗಳು ಯಾವುವು? ಅಭಿಮನ್ಯು ಈ ರೀತಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಕಾರಣವೇನು? ಆಬಾಲವೃದ್ಧರವರಿಗೆ ಆಪ್ತನಾಗಲು ಆತನಲ್ಲಿರುವ ಅಂತಹ ವಿಶೇಷತೆ ಏನು? ಆತ ಇಲ್ಲಿಯವರೆಗೆ ನಡೆಸಿರುವ ಪ್ರಮುಖ ಕಾರ್ಯಾಚರಣೆಗಳು ಯಾವುದು…? ಹೀಗೆ ಅಭಿಮನ್ಯುವಿನ ಕುರಿತ ಅತ್ಯಂತ ಸ್ವಾರಸ್ಯಕರ ವಿಷಯಗಳನ್ನು ಒಳಗೊಂಡ ಕೃತಿ `ಅಭಿಮನ್ಯು ದಿ ಗ್ರೇಟ್’ ಆಕರ್ಷಕ ಪುಟ ವಿನ್ಯಾಸ ಹೊಂದಿದೆ.

ವೈಲ್ಡ್ಲೈಫ್ ಕನ್ಸರ್‌ವೇಷನ್ ಫೌಂಡೇಶನ್’ನ ರಾಜ್‌ಕುಮಾರ್ ದೇವರಾಜೆ ಅರಸ್ ಅವರು ಆಕರ್ಷಕ ಮುನ್ನಡಿ ಬರೆದಿದ್ದಾರೆ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ. ಈ ಕೃತಿ ಕೂಡ ಸಾಕಷ್ಟು ಕುತೂಹಲ, ನಿರೀಕ್ಷೆ ಮೂಡಿಸಿದೆ. ಲೇಖಕರ ಮೊಬೈಲ್ ಸಂಖ್ಯೆ: 9483049005

key words : mysore-elephant-story-dasara-jamboo-book