ವಿಜಯಲಕ್ಷ್ಮಿ ಮನಾಪುರ ಅವರಿಗೆ “ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜೀವಮಾನ ಸಾಧನೆ ರಾಷ್ಟ್ರೀಯ ಪ್ರಶಸ್ತಿ”

ಮೈಸೂರು,ನವೆಂಬರ್,22,2022(www.justkannada.in): ಜನಪದ  ಗಾಯಕರೂ, ಕಲಾಪ್ರದರ್ಶಕರೂ ಆಗಿರುವ ಡಾ. ವಿಜಯಲಕ್ಷ್ಮಿ ಮನಾಪುರ ಅವರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಬೋಧನೆ, ಸಂಶೋಧನೆ, ಕ್ಷೇತ್ರಕಾರ್ಯ, ಪ್ರಕಟಣೆಗಳ ಜೊತೆಗೆ ಜನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ನೀಡುತ್ತಿರುವ ಅವಿರತ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ “ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜೀವಮಾನ ಸಾಧನೆ ರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ.

ಇಂಟರ್‌ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ರಿಫಾರ್ಮ್ಸ್(ರಿ) ಬೆಂಗಳೂರು, (International Institute for Social and Economic Reforms(R). Bengaluru). ಈ ಸಂಸ್ಥೆಯು ಪ್ರತಿವರ್ಷ ಭಾರತದ ವಿವಿಧ ರಾಜ್ಯಗಳಲ್ಲಿ ತಮ್ಮದೇ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ “ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜೀವಮಾನ ಸಾಧನೆ ರಾಷ್ಟ್ರೀಯ ಪ್ರಶಸ್ತಿ” ನೀಡುತ್ತಾ ಬರುತ್ತಿದೆ. ಪ್ರಸ್ತುತ 2022ರ ಈ ಪ್ರತಿಷ್ಠಿತ ಪ್ರಶಸ್ತಿಗೆ  ಕರ್ನಾಟಕದಿಂದ ಡಾ. ವಿಜಯಲಕ್ಷ್ಮಿ ಮನಾಪುರ, ಪ್ರಾಧ್ಯಾಪಕರು, ಜಾನಪದ ವಿಭಾಗ, ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಇವರು ಭಾಜನರಾಗಿದ್ದು, ನವೆಂಬರ್ 19 ರಂದು ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಡಾ. ವಿಜಯಲಕ್ಷ್ಮಿ ಮನಾಪುರ ಅವರು ಅಧ್ಯಾಪನದ ಜೊತೆಜೊತೆಗೆ ವೃತ್ತಿ ಮತ್ತು ಅಭಿರುಚಿಗಳೆರಡರಲ್ಲಿಯೂ ಜಾನಪದವನ್ನೇ ಉಸಿರಾಗಿಸಿಕೊಂಡು, ಅಧ್ಯಯನಶೀಲರಾಗಿ ಜೀವಪರ ಧೋರಣೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಸೃಜನಶೀಲರಾಗಿ ತಮ್ಮನ್ನು ತೊಡಗಿಸಿಕೊಂಡು ವ್ಯಾಪಕ ಅಧ್ಯಯನ, ವೈಚಾರಿಕ ದೃಷ್ಟಿಕೋನದಿಂದ ಚಿಂತಿಸುವ ಇವರು ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಕಾರ್ಯಗಾರ, ವಿಚಾರಸಂಕಿರಣ, ಸಮ್ಮೇಳನಗಳಲ್ಲಿ ಭಾಗವಹಿಸಿ ಇದುವರೆಗೆ 90ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿರುವ ಹಿರಿಮೆ ಇವರದು. ಅಲ್ಲದೆ ನಾಡಿನ ಬೇರೆಬೇರೆ ನಿಯತಕಾಲಿಕೆ, ಸಂಪಾದನಾ ಗ್ರಂಥಗಳಲ್ಲಿ ಇದುವರೆಗೆ 55ಕ್ಕೂ ಹೆಚ್ಚು ವೈವಿಧ್ಯಮಯ ವಿಷಯಗಳತ್ತ ದೃಷ್ಟಿಹರಿಸಿ ಮಹತ್ವಪೂರ್ಣ ಲೇಖನಗಳನ್ನು ಬರೆದು, ಪ್ರಕಟಿಸಿ ಈ ಕ್ಷೇತ್ರದ ತಜ್ಞರ ಗಮನ ಸೆಳೆದಿದ್ದಾರೆ.

ಕರ್ನಾಟಕದಲ್ಲಷ್ಟೇ ಅಲ್ಲದೆ ತಮಿಳುನಾಡಿನಲ್ಲೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ಪ್ರಬಂಧ ಮಂಡಿಸಿ ಹೊರ ರಾಜ್ಯದಲ್ಲೂ ಕನ್ನಡದ ಕಂಪನ್ನು ಪಸರಿಸಿದ್ದಾರೆ.

Key words: mysore-Dr. Vijayalakshmi Manapura- A.P.J. Abdul Kalam –Lifetime- Achievement -National Award.