ಮೈಸೂರು ಅಭಿವೃದ್ಧಿ ಯೋಜನೆಗಳ ಕ್ರೆಡಿಟ್ ವಾರ್: ಸಂಸದ ಪ್ರತಾಪ್ ಸಿಂಹ ಪಂಥಾಹ್ವಾನಕ್ಕೆ ಡೇಟ್ ಫಿಕ್ಸ್ ಮಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್.

ಮೈಸೂರು,ಜೂನ್,25,2022(www.justkannada.in): ಮೈಸೂರು ಅಭಿವೃದ್ಧಿ ಯೋಜನೆಗಳ  ಬಗ್ಗೆ ಚರ್ಚೆಗೆ ಸಂಸದ ಪ್ರತಾಪ್ ಸಿಂಹ ನೀಡಿದ್ಧ ಪಂಥಾಹ್ವಾನಕ್ಕೆ ಸಿದ್ದರಾಮಯ್ಯ ಸೂಚನೆ ಮೇರೆಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಡೇಟ್ ಫಿಕ್ಸ್ ಮಾಡಿದ್ದಾರೆ.

ಜೂನ್ 29ರ ಮಧ್ಯಾಹ್ನ 12 ಗಂಟೆಗೆ  ಸಂಸದರ ಕಚೇರಿಯಲ್ಲಿ ಚರ್ಚೆಗೆ ಸಿದ್ದ. ಸಂಸದರ ಜಲದರ್ಶಿನಿಯ ಕಚೇರಿ ಬಳಿ ದಾಖಲೆ ಸಮೇತ ಹಾಜರಾಗುವೆ. ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ಎರಡನೇ ಬಾರಿಗೆ ಆಹ್ವಾನ ನೀಡುತ್ತಿದ್ದೂ ಈ ಬಾರಿ ಪಲಾಯನ ಮಾಡಬೇಡಿ. ಜನರಿಗೆ ಸತ್ಯ ಹೇಳಲು ಯಾರಾದರೇನು.? ಚರ್ಚೆಗೆ ಬನ್ನಿ ಎಂದ ಕೆಪಿಸಿಸಿ ವಕ್ತಾರ ಎಂ. ಲಕ್ಮಣ್ ಸವಾಲು ಹಾಕಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ 10  ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮುಂದಿನ ವಿಧಾನಸಭೆ ಚುನಾವಣೆವರೆಗೂ ಎಸ್ ಟಿ ಸೋಮಶೇಖರ್ ಅವರೇ ಉಸ್ತುವಾರಿ ಸಚಿವರಾಗಿ ಮುಂದುವರಿಯಲಿ. ಎಸ್. ಟಿ ಸೋಮಶೇಖರ್ ಮೈಸೂರಿಗೆ ಬರುತ್ತಿರುವುದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸಲುವಾಗಿ.ಬಿಜೆಪಿ ಸ್ಥಳೀಯ ಮುಖಂಡರ ಜೊತೆ ಸೇರಿಕೊಂಡು ಎಸ್. ಟಿ ಸೋಮಶೇಖರ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಹಾಗಾಗಿ ಅವರನ್ನೇ ಮುಂದುವರಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಿದರು.

ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸೋಣ ಬನ್ನಿ: ಪ್ರತಾಪ್ ಸಿಂಹಗೆ ಎಂ. ಲಕ್ಷ್ಮಣ್ ಸವಾಲ್.

ಗ್ರಾಮ  ಪಂಚಾಯತ್ ನಲ್ಲೂ ಗೆಲ್ಲದ ವ್ಯಕ್ತಿ ಮುಂದೆ ಚರ್ಚೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್,  ಗ್ರಾಮ ಪಂಚಾಯತ್ ನಲ್ಲಿ ಪಕ್ಷದ ಚಿಹ್ನೆ ಇಲ್ಲದೆ ಇಬ್ಬರು ಸ್ಪರ್ಧಿಸೋಣ ಬನ್ನಿ. ವೈಯಕ್ತಿಕ ವರ್ಚಸ್ಸಿನಿಂದ ಗ್ರಾ. ಪಂ ನಿಂದ ಆಯ್ಕೆಯಾಗಿ ಸಾಬೀತು ಪಡಿಸುತ್ತೇನೆ.ಮೋದಿ ಹೆಸರಿಲ್ಲದೆ ನೀವು ಗ್ರಾ.ಪಂ ಸದಸ್ಯನೂ ಆಗಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ನೀವು ಎಲ್ಲಿರುತ್ತಿರಿ  ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ಆಭಿಯಾನದಿಂದ ಬಿಜೆಪಿ ವಿಚಲಿತವಾಗಿದೆ. ಭಾರತ್ ಜೋಡೊ ಅಭಿಯಾನವನ್ನು ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಆರು ತಿಂಗಳ ಕಾಲ ನಡೆಸಲಿದೆ. ಇದರಿಂದ ಬಿಜೆಪಿ ಆತಂಕಕ್ಕೊಳಗಾಗಿದೆ‌. ಇದೇ ಕಾರಣದಿಂದ ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಇಡಿ ದಾಳಿ, ವಿಚಾರಣೆ ಮುಖಾಂತರ ತೊಂದರೆ ಕೊಡುತ್ತಿದೆ ಎಂದರು.

ಮೈಸೂರಿನಲ್ಲಿ ಪಿಕ್ನಿಕ್ ಮುಗಿಸಿ ಹೊರಟ ಮೋದಿ: ವ್ಯಂಗ್ಯ

ಪ್ರಧಾನಿ ಮೋದಿ ಅವರ ರಾಜ್ಯ ಪ್ರವಾಸದ ಬಗ್ಗೆ ಟೀಕಿಸಿದ ಎಂ. ಲಕ್ಷ್ಮಣ್,  ಮೈಸೂರಿನಲ್ಲಿ ಪಿಕ್ನಿಕ್ ಮುಗಿಸಿ ಹೊರಟ ಮೋದಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಮೈಸೂರಿನಲ್ಲಿ 19 ಕೋಟಿ, ಬೆಂಗಳೂರಿನಲ್ಲಿ 34ಕೋಟಿ ಮೋದಿಗಾಗಿ ಆದ ಖರ್ಚು.ಬಂದು ಹೋದ ಮೋದಿಯಿಂದ ರಾಜ್ಯಕ್ಕೆ ಏನು ಕೊಡುಗೆ ಇಲ್ಲ. 20 ನಿಮಿಷ ಯೋಗ ಮಾಡಿ ಪ್ರಚಾರ ಮಾಡಿಕೊಂಡು ಹೋದರು. ಈ ಬಾರಿ ಮೈಸೂರಿನಲ್ಲಿ ಚುನಾವಣೆ ಇಲ್ಲದಿದ್ದರಿಂದ ಯಾವು ಅನುದಾನವನ್ನು ನೀಡಲಿಲ್ಲ.ಒಟ್ಟಾರೆ ರಾಜ್ಯದಲ್ಲಿ ಮೋದಿ ಪಿಕ್ನಿಕ್ ಮುಗಿಸಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ನರೇಂದ್ರ ಮೋದಿ ಭೇಟಿಯಿಂದ ಮೈಸೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ವ್ಯಂಗ್ಯವಾಡಿದ ಎಂ.ಲಕ್ಷ್ಮಣ್, ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ‌. ಅಂದಿನ ಮೈಸೂರು ಅರಸರ ಕಾಲದಿಂದಲೂ ಯೋಗ ಇದೆ. ಪ್ರವಾಸಿಗರು ಭೇಟಿ ನೀಡುವ ತಾಣಗಳ ಪೈಕಿ ಇಡೀ ಏಷ್ಯಾದಲ್ಲೇ ಮೈಸೂರು 4ನೇ ಸ್ಥಾನದಲ್ಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೂ ಬಿಜೆಪಿಯವರು ಮೋದಿ ಭೇಟಿಯಿಂದಲೇ ಮೈಸೂರು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಮೋದಿ ಭೇಟಿಯಿಂದ ಮೈಸೂರಿಗೆ ಯಾವುದೇ ಪ್ರಯೋಜನವಾಗಿಲ್ಲ. ಮೋದಿ ಮೈಸೂರು ಭೇಟಿ ವಿಚಾರದಲ್ಲೂ ಬಿಜೆಪಿ ನಾಯಕರ ನಡುವೆ ಕ್ರೆಡಿಟ್ ವಾರ್ ನಡೆಯಿತು ಎಂದು ಟೀಕಿಸಿದರು.

Key words: Mysore -Development – KPCC –spokesperson-Laxman – date fix -MP Pratap Simha.