ಮಾಜಿ ಸಿಎಂ ಆಪ್ತನಿಗೆ ಸಂಕಷ್ಠ : ಮೈಸೂರಿನ ಹಿಂದಿನ ಡಿಸಿ ನೀಡಿದ್ದ ಕೊಲೆ ಬೆದರಿಕೆ ದೂರಿನ ವಿಚಾರಣೆ ನಡೆಸಿದ ಕೋರ್ಟ್.

 

ಮೈಸೂರು, ಆ.24, 2021 : (www.justkannada.in news) : ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ವಿರುದ್ಧ ಐಎಎಸ್ ಅಧಿಕಾರಿ ಶಿಖಾ ನೀಡಿದ್ದ ಕೊಲೆ ಬೆದರಿಕೆ ದೂರು ಪ್ರಕರಣದ ವಿಚಾರಣೆ ಇಂದು ನಡೆಯಿತು.

ನಗರದ 3ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ( ಸಿಸಿ ನಂ.1358/2016 ) ವಿಚಾರಣೆ ನಡೆಯಿತು. ಈ ವೇಳೆ ಕೆ.ಮರೀಗೌಡ ಹಾಗೂ ಇತರೆ ಇಬ್ಬರು ಗೈರು ಹಾಜರಾದ ಕಾರಣ, ವಕೀಲರ ಕೋರಿಕೆ ಮೇರೆಗೆ ಪ್ರಕರಣದ ವಿಚಾರಣೆಯನ್ನು ಆ.31ಕ್ಕೆ ಮುಂದೂಡಲಾಯಿತು.
ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಶಿಖಾ ಅವರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಬಿ.ವಿ.ರಾಮಮೂರ್ತಿ ಹಾಗೂ ಆರ್.ಗಿರಿಜೇಶ್ ವಕಾಲತ್ತು ವಹಿಸಿದ್ದರು.

ಈ ಹಿಂದೆ 2016 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಅವರ ಆಪ್ತ ಸ್ನೇಹಿತ ಮರಿಗೌಡ ವಿರುದ್ಧ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರು ಕೊಲೆ ಬೆದರಿಕೆ ದೂರು ದಾಖಲಿಸಿದ್ದರು.

ಏನಿದು ಪ್ರಕರಣ :

ಇಫ್ತಾರ್ ಕೂಟಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಸಿಎಂ ಆಪ್ತ , ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮರಿಗೌಡ ಮತ್ತವರ ಹಿಂಬಾಲಕರು ಮೈಸೂರು ಜಿಲ್ಲಾಧಿಕಾರಿ ಸಿ,ಶಿಖಾ ಅವರಿಗೆ ಮುಖ್ಯಮಂತ್ರಿಗಳ ಮುಂದೆಯೇ ಬೆದರಿಕೆ ಹಾಕಿದ್ದರು.

ಇಫ್ತಾರ್ ಕೂಟ ಹಿನ್ನೆಲೆಯಲ್ಲಿ ಮೈಸೂರಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿಖಾ ಅವರ ವಿರುದ್ಧ ಮರೀಗೌಡ ಅವರು ದೂರು ಹೇಳಿದ್ದರು. ಯಾದಗಿರಿ ಉಪ ವಿಭಾಗಾಧಿಕಾರಿಯಾಗಿ ಬಡ್ತಿ ಹೊಂದಿ ವರ್ಗಾವಣೆಯಾಗಿರುವ ನವೀನ್ ಜೋಸೆಫ್ ಅವರನ್ನು ತಹಶೀಲ್ದಾರ್ ಹುದ್ದೆಯಿಂದ ಜಿಲ್ಲಾಧಿಕಾರಿ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮರೀಗೌಡ ಅವರು ಕೆಲಹೊತ್ತು ಮಾತುಕತೆ ನಡೆಸಿದ್ದರು.

ಇದರಂತೆ ಡಿಸಿ. ಶಿಖಾ ಅವರು ಇದೇ ವಿಚಾರವನ್ನು ಮುಖ್ಯಮಂತ್ರಿಗಳ ಎದುರು ಪ್ರಸ್ತಾಪ ಮಾಡಿದಾಗ ಸಿಟ್ಟಿಗೆದ್ದ ಮರೀಗೌಡ ಅವರು ಶಿಖಾ ಅವರ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದರು. ನಂತರ ಮರೀಗೌಡ ಅವರ ಬೆಂಬಲಿಗರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗುತ್ತ ಕಾರನ್ನು ಅಡ್ಡಹಾಕಿದ್ದರು. ಇದಕ್ಕೆ ಉತ್ತರ ನೀಡಿದ್ದ ಶಿಖಾ ಅವರು ಆಡಳಿತ ಕುರಿತ ವಿಚಾರವನ್ನು ಮರೀಗೌಡ ಅವರಿಗೆ ವಿವರಣೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಶಿಖಾ ಅವರು ಕಾಂಗ್ರೆಸ್ ನಾಯಕ ಮರೀಗೌಡ ಮತ್ತಿಬ್ಬರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಮರೀಗೌಡ ಹಾಗೂ ಮತ್ತಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 504 (ಉದ್ದೇಶಪೂರ್ವಕ ಅವಮಾನ ಮತ್ತು ಸಾರ್ವಜನಿಕ ಶಾಂತಿಗೆ ಭಂಗ, ಪ್ರಚೋದನೆ), 353 (ಸಾರ್ವಜನಿಕ ಸೇವಕರಿಗೆ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

ENGLISH SUMMARY…

Trouble for former CM’s close aide: Court trial on threatening to murder former Mysuru DC
Mysuru, August 24, 2021 (www.justkannada.in): The court trial of Mysuru Zilla Panchayat former President, and Congress leader K. Marigowda who is facing charges of threatening the former Deputy Commissioner of Mysuru Shikha, was held today.
The trial was held at the 3rd City Civil Court (CC No.1358/2016). As the accused K. Marigowda and two others were absent, the case was put off to August 31, upon the request made by the advocate representing the accused.
Special Government Prosecutor B.V. Ramamurthy and R. Girijesh represented IAS officer Shikha in this case.
It can be recalled here that then Deputy Commissioner of Mysuru C. Shikha had lodged a complaint against Marigowda, who is a close aide of former Chief Minister Siddaramaiah, in the year 2016, charging him of threatening to kill her.
Keywords: K. Marigowda/ Court trial/ former DC/ Mysuru/ C. Shikha/ murder charges

key words : mysore-dc-court-shika-ias-cm