ವಿಶ್ವ ವಿಖ್ಯಾತ  ನಾಡಹಬ್ಬ ಸಾಮಾನ್ಯರ ದಸರಾ ಆಗಬೇಕು: ಇದಕ್ಕೆ ಅಧಿಕಾರಿಗಳು ಸಹಕರಿಸಿ-ಸಚಿವ  ವಿ.ಸೋಮಣ್ಣ ಮನವಿ…

ಮೈಸೂರು,ಸೆ.12,2019(www.justkannada.in): ವಿಶ್ವ ವಿಖ್ಯಾತ ನಾಡಹಬ್ಬವು ಸಾಮನ್ಯರ ದಸರಾವಾಗಬೇಕು. ದಸರಾ ಅಧಿಕಾರಿಗಳ ಮತ್ತು ರಾಜಕಾರಣೀಗಳ ದಸರಾ ಆಗಬಾರದು. ಇದಕ್ಕೆ ಅಧಿಕಾರಿಗಳು ಸಹಕರಿಸಬೇಕು ಎಂದು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ  ಮನವಿ ಮಾಡಿದರು.

ಮೂಡಾ ಕಛೇರಿಯ ಸಭಾಂಗಣದಲ್ಲಿ ಇಂದು  ದಸರಾ ಸಿದ್ಧತೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ  ಸಚಿವ ವಿ.ಸೋಮಣ್ಣ, ನಾಡಹಬ್ಬ ನಮ್ಮ ಮನೆಯ ಸ್ವತ್ತು ಆಗಬಾರದು. ದಸರಾ ಪಾಸ್ ಪಡೆದಿರುವವರಿಗೆ ಹಾಗೂ ಸಾಮಾನ್ಯರಿಗೆ ಮತ್ತು ದೇಶ ವಿದೇಶಗಳಿಂದ ಬರುವವರಿಗೆ ದಸರಾ ವೀಕ್ಷಣೆ ಮಾಡಲು ಅಧಿಕಾರಿಗಳು ಸಹಕರಿಸಬೇಕು. ಇದರಿಂದ ಹೊಸ ಸಂದೇಶ ಜನತೆಗೆ ತಲುಪಬೇಕು ಎಂದರು.

ಸೆಪ್ಟೆಂಬರ್‌ 29 ರಂದು ಬೆಳ್ಳಿಗ್ಗೆ 10 ಗಂಟೆ 21 ನಿಮಿಷಕ್ಕೆ  ದಸರಾ ಕ್ರೀಡಾ ಜ್ಯೋತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡುವರು. ಕ್ರೀಡಾ ಜ್ಯೋತಿಯು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿ ಅಕ್ಟೋಬರ್ 1 ಕ್ಕೆ ಮೈಸೂರಿಗೆ ತಲುಪುವುದು. ಈಗಾಲೇ ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟ ಪ್ರಾರಂಭವಾಗಿದ್ದು, ಜಿಲ್ಲಾಮಟ್ಟದಲ್ಲಿ ಸೆಪ್ಟಂಬರ್ 14 ರಿಂದ ಪ್ರಾರಂಭವಾಗಲಿದೆ ಎಂದು  ದಸರಾ ಕ್ರೀಡಾ ಕೂಟ ಉಪಸಮಿತಿಯ  ಸದಸ್ಯರು ಸಭೆಯಲ್ಲಿ ತಿಳಿಸಿದರು.

ರೈತ ದಸರಾವು ಅಕ್ಟೋಬರ್ 1ರಿಂದ 3ರವರಗೆ ನಡೆಯಲಿದೆ. ಅದರ ಜೊತೆಗೆ ಮತ್ಸ್ಯ ಮೇಳವನ್ನು ಆಯೋಜಿಸಲಾಗುವುದು ಎಂದು ರೈತ ದಸರಾ ಉಪ ಸಮಿತಿಯವರು ಸಚಿವರಿಗೆ ಮಾಹಿತಿ ನೀಡಿದರು.

ದಸರಾ ದೀಪಾಲಂಕಾರವು ಮೈಸೂರು ನಗರದ ಸೌಂದರ್ಯ ಹೆಚ್ಚಿಸುತ್ತದೆ. ಪ್ರವಾಸಿಗರು ಸ್ಥಳೀಯರನ್ನು ಆಕರ್ಷಿಸುತ್ತದೆ.ಆಗಾಗಿ ದಸರಾ ದೀಪಾ ಅಲಂಕಾರದ ಬಗ್ಗೆ ಗಮನಹರಿಸುವಂತೆ ದೀಪಲಂಕಾರ ಉಪ ಸಮಿತಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಯೋಗ ದಸರಾ ಉಪ ಸಮಿತಿಯವರು ಅದರ ಬಗ್ಗೆ ಎಸ್.ಎ.ರಾಮದಾಸ್ ಅವರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯುವಂತೆ ತಿಳಿಸಿದರು.

ಆಹಾರ ಮೇಳವು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 10 ರವರಗೆ ಎರಡು ಸ್ಥಳದಲ್ಲಿ ನಿಗಧಿಪಡಿಸಲಾಗಿದೆ. ಸ್ಕೌಟ್ಸ್ ಅಂಡ್ ಗ್ಲೈಡ್ಸ್ ಮೈದಾನ ಹಾಗೂ ಲಲಿತ್ ಮಹಲ್ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಮೂಡಾ ಆಯುಕ್ತರಾದ ಪಿ.ಎಸ್ ಕಾಂತರಾಜು ಸಭೆಯಲ್ಲಿ ತಿಳಿಸಿದರು.

ಎಸ್.ಎಂ.ಪಿ ಬಿಲ್ಡರ್ಸ್ ಶಿವಪ್ರಕಾಶ್ ಅವರು ದಸರಾ ಆಚರಣೆಗಾಗಿ 5 ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ದೇಣಿಗೆಯಾಗಿ ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿದರು.

ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಅಭಿರಾಂ ಜಿ ಶಂಕರ್, ನಗರ ಪೋಲಿಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಪೋಲಿಸ್‌ ವರಿಷ್ಠಾಧಿಕಾರಿ ರಿಷ್ಯಂತ್, ಅಪರಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧೀಕಾರಿ ಕೆ.ಜ್ಯೋತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words:  mysore Dasara-common man- Minister -V. Somanna –cooperate-officer