ವಂಚನೆ ಪ್ರಕರಣ : ಮಾಜಿ ಕಾರ್ಪೋರೇಟರ್ ಸಲ್ಲಿಸಿದ ನಿರೀಕ್ಷಣಾ ಜಾಮೀನಿನ ತೀರ್ಪು ಇಂದು …

 

ಮೈಸೂರು, ಜೂ.15, 2019 : (www.justkannada.in news) : ವಂಚನೆ ಪ್ರಕರಣವೊಂದರ ಆರೋಪ ಎದುರಿಸುತ್ತಿರುವ ಮೈಸೂರು ನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಸೋಮಸುಂದರ್ ಅವರ ನಿರೀಕ್ಷಣ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು ಈ ಸಂಬಂಧ ಇಂದು ನ್ಯಾಯಾಲಯ ತೀರ್ಪು ನೀಡಲಿದೆ.

ಮೈಸೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್, ಗಿರಿಯಭೋವಿ ಪಾಳ್ಯ ನಿವಾಸಿ ಸೋಮಸುಂದರ್ ಹಾಗೂ ಇತರೆ 13 ಮಂದಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ನಿರುದ್ಯೋಗಿ ಯುವಕರಿಗೆ ಉದ್ಯೋಗದ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಬಳಿಕ ಉದ್ಯೋಗ ಕೊಡಿಸುವಲ್ಲಿ ವಿಫಲರಾದ ಕಾರಣ ಆ ಯುವಕರು ನೀಡಿದ್ದ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ನಿಮ್ಮಿಂದ ಯಾವುದೇ ಹಣ ಪಡೆದಿಲ್ಲ. ಹಾಗಾಗಿ ಯಾವುದೇ ಹಣವನ್ನು ನೀಡುವುದಿಲ್ಲ ಎಂದು ನುಣುಚಿಕೊಂಡಿದ್ದರು. ಆದರೆ ಹಣ ಪಡೆಯುವುದನ್ನು ಯುವಕರು ವಿಡಿಯೋ ಮಾಡುವ ಮೂಲಕ ಸಾಕ್ಷಿ ಸಂಗ್ರಹಿಸಿದ್ದರು. ಈ ಆಧಾರದ ಮೇಲೆ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ಈ ದೂರಿನ ಮೇರೆಗೆ ಪೊಲೀಸರು ಸೋಮಸುಂದರ್, ಕಾವ್ಯ, ಶಿವಂಶಕರ್ ಸೇರಿದಂತೆ ಒಟ್ಟು 13 ಮಂದಿ ವಿರುದ್ಧ 506, 420 ಹಾಗೂ 410 ಪ್ರಕರಣ ದಾಖಲಿಸಿದ್ದರು.

ಬಳಿಕ ಆರೋಪಿಗಳಾದ ಕಾವ್ಯ, ಶಿವಶಂಕರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಒಂಟಿಗೋಡಿ, ಅರ್ಜಿ ತಿರಸ್ಕರಿಸಿದ್ದರು.

ಇದೀಗ ಪ್ರಕರಣದ ಮತ್ತೊಬ್ಬ ಆರೋಪಿ, ಮಾಜಿ ಕಾರ್ಪೋರೇಟರ್ ಸೋಮಸುಂದರ್, ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಹೊರ ಬೀಳಲಿದೆ. ಇಂದು ಮಧ್ಯಾಹ್ನದ ವೇಳೆಗೆ ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯದೆ ಇದೆ.

————-

key words : mysore-court-mcc-corporater-bail-application