ವಿವಾದಕ್ಕೆ ಎಡೆಮಾಡಿದ ಮೈಸೂರು ಪಾಲಿಕೆ ಪ್ರಭಾರ ಸೂಪರಿಂಡೆಂಟ್ ಎಂಜಿನಿಯರ್ ಹುದ್ದೆ ನೇಮಕ…

kannada t-shirts

ಮೈಸೂರು, ಜೂ.26, 2019 : (www.justkannada.in news) : ವಿದ್ಯಾರ್ಹತೆ ಇಲ್ಲದಿರುವ ವ್ಯಕ್ತಿಗೆ ನಗರ ಪಾಲಿಕೆ ಸಹಾಯಕ ಆಯುಕ್ತರ ಹುದ್ದೆ ನೀಡಲಾಗಿದೆ ಎಂಬ ಅರೋಪ ಕೇಳಿ ಬಂದಿದ್ದರು ಇದೀಗ ಮತ್ತೆ ಅದೇ ವ್ಯಕ್ತಿಯನ್ನು ನಗರಪಾಲಿಕೆಗೆ ಪ್ರಭಾರ ಸೂಪರಿಂಡೆಂಟ್ ಎಂಜಿನಿಯರ್ ಆಗಿ ನೇಮಕ ಮಾಡಲಾಗಿದೆ.

ಕಳೆದ 6 ವರ್ಷಗಳ ಹಿಂದೆಯೇ ಸಹಾಯಕ ಆಯುಕ್ತರ ಹುದ್ದೆ ಅರ್ಹತೆ ಬಗ್ಗೆ ಪ್ರಶ್ನಿಸಿದ್ದರೂ ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗದ ಸರಕಾರ ಇದೀಗ ಅದೇ ವ್ಯಕ್ತಿಯನ್ನು ಸೂಪರಿಂಡೆಂಟ್ ಇಂಜಿನಿಯರ್ ಹುದ್ದೆಗೆ ನೇಮಕ ಮಾಡಿರುವುದು ವಿವಾದಕ್ಕೆ ಎಡೆಮಾಡಿದೆ.

ಈ ಹಿಂದೆ ಮೈಸೂರು ನಗರ ಪಾಲಿಕೆ ವಲಯ-9 ರಲ್ಲಿ ಸಹಾಯಕ ಆಯುಕ್ತರಾಗಿದ್ದ ಮಹೇಶ್ ಎಂಬುವವರ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಲಾಗಿತ್ತು. ಅರ್ಹತೆ ಇಲ್ಲದಿದ್ದರೂ ಸಹ ಅವರನ್ನು ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದೀಗ ಅದೇ ವ್ಯಕ್ತಿಯನ್ನು ಎಂಸಿಸಿ ಸೂಪರಿಂಡೆಂಟ್ ಇಂಜಿನಿಯರ್ ಹುದ್ದೆಗೆ ಪ್ರಭಾರಿಯನ್ನಾಗಿ ನೇಮಕ ಮಾಡಿರುವುದು ಆಶ್ಚರ್ಯ ತಂದಿದೆ.

ಏನಿದು ಘಟನೆ :
ಮೈಸೂರಿನ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಬಾನುಮೋಹನ್ ಎಂಬುವವರು ಮೈಸೂರು ನಗರ ಪಾಲಿಕೆ ವಲಯ-9 ರಲ್ಲಿ ಸಹಾಯಕ ಆಯುಕ್ತರಾಗಿದ್ದ ಮಹೇಶ್ ಎಂಬುವವರ ಶೈಕ್ಷಣಿಕ ಅರ್ಹತೆ ಬಗ್ಗೆ ದಾಖಲೆ ಕೇಳಿದ್ದರು. ಈ ಸಂಬಂಧ 16-7-2012 ರಲ್ಲಿ ಮಾಹಿತಿ ನೀಡಿ ಮೈಸೂರು ಮಹಾನಗರ ಪಾಲಿಕೆ , ಸಹಾಯಕ ಆಯುಕ್ತ ಮಹೇಶ್ ಅವರು ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ್ದಾರೆ. ಐಟಿಐ ಹಾಗೂ ಐಎಂಇ ಮಾಡಿರುವ ಬಗ್ಗೆ ಮಾಹಿತಿ ನೀಡಿತ್ತು.

ಜತೆಗೆ ಬಾನು ಮೋಹನ್ ಅವರ ಎರಡನೇ ಪ್ರಶ್ನೆ, ಸಹಾಯಕ ಆಯುಕ್ತರ ಹುದ್ದೆಗೆ ಯಾವ ವಿದ್ಯಾರ್ಹತೆ ಹೊಂದಿರಬೇಕು ಎಂಬುದಕ್ಕೆ ಉತ್ತರಿಸಿದ್ದ ಪಾಲಿಕೆ ಅಧಿಕಾರಿಗಳು, ನಗರ ಪಾಲಿಕೆ ವಲಯ ಸಹಾಯಕ ಆಯುಕ್ತರ ಹುದ್ದೆಗೆ ನೇಮಕಗೊಳ್ಳುವವರು 2011 ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಸಹಾಯಕ ಆಯುಕ್ತರ ಹುದ್ದೆಯನ್ನು ಕೆಎಎಸ್ ಕಿರಿಯಶ್ರೇಣಿ/ ಕೆಎಎಂಎಸ್ ಕಮಿಷನರ್ ಗ್ರೇಡ್ 2 ವೃಂದದಿಂದ ತುಂಬಬೇಕಾಗಿರುತ್ತದೆ ಎಂದು
ಸ್ಪಷ್ಟಪಡಿಸಿದ್ದರು.
ಆ ಮೂಲಕ ವಲಯ ಸಹಾಯಕ ಆಯುಕ್ತರಾಗಿದ್ದ ಮಹೇಶ್ ಅವರು ಅರ್ಹತೆ ಇಲ್ಲದೆ ಹುದ್ದೆಯಲ್ಲಿರುವುದು ಸ್ಪಷ್ಟವಾಗಿತ್ತು. ಇದೀಗ ಅದೇ ವ್ಯಕ್ತಿಯನ್ನು ಮೈಸೂರು ನಗರ ಪಾಲಿಕೆ ಸೂಪರಿಂಡೆಂಟ್ ಇಂಜಿನಿಯರ್ ಹುದ್ದೆಗೆ ಪ್ರಭಾರಿಯನ್ನಾಗಿ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

key words : mysore-city-corporation-superintendent-engineer-mahesh-appointment-controversy

website developers in mysore