ಮೈಸೂರು ಮೇಯರ್ ವಿರುದ್ಧ ಪಾಲಿಕೆಯ ಜೆಡಿಎಸ್ ಮತ್ತು ಕಾಂಗ್ರೆಸ್  ಸದಸ್ಯರಿಂದ ಪ್ರತಿಭಟನೆ.

kannada t-shirts

ಮೈಸೂರು,ಮಾರ್ಚ್,15,2023(www.justkannada.in): ಮೇಯರ್ ಆಗಿ  ಆರೇಳು ತಿಂಗಳು ಕಳೆದರೂ ಸರಿಯಾಗಿ ಕೌನ್ಸಿಲ್ ಸಭೆ ಕರೆಸಿಲ್ಲ, ಸ್ಥಾಯಿ ಸಮಿತಿ ರಚನೆ ಮಾಡಿಲ್ಲವೆಂದು  ಅಸಮಾಧಾನ ವ್ಯಕ್ತಪಡಿಸಿ ಇಂದು ಮೈಸೂರು ಮಹಾನಗರ ಪಾಲಿಕೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಮೇಯರ್ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಕೆ ಸದಸ್ಯರಿಂದ  ಪ್ರತ್ಯೇಕ ಧರಣಿ ಸತ್ಯಾಗ್ರಹ ನಡೆಯಿತು.  ಜೆಡಿಎಸ್ ನವರು ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸಿದರೆ, ಕಾಂಗ್ರೆಸ್ ನವರು ಮೇಯರ್ ಕಚೇರಿ ಮುಂದೆ  ಪ್ರತಿಭಟನೆ ನಡೆಸಿದರು.

ಅನಾರೋಗ್ಯದ ನೆಪ ಹೇಳಿಕೊಂಡು ಪದೇ ಪದೆ ಕೌನ್ಸಿಲ್ ಸಭೆ ಮುಂದೂಡುತ್ತಿರುವ ಮೇಯರ್ ವಿರುದ್ಧ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ನಡೆಸಲು ಆಗದಿದ್ದರೇ ರಾಜಿನಾಮೆ ಕೊಟ್ಟು ಹೋಗಿ. ಕೌನ್ಸಿಲ್ ಕರೆಯದೇ ಜನರ ಸಮಸ್ಯೆಗಳು ಬಗೆ ಹರಿಯುವುದಾದರೂ ಹೇಗೆ.? ಅಭಿವೃದ್ಧಿ ಕೆಲಸ ಕಾರ್ಯಗಳು ಆಗುವುದಾದರೂ ಹೇಗೆ ಎಂದು ಮೇಯರ್ ವಿರುದ್ಧ ಸದಸ್ಯರು ಕಿಡಿ ಕಾರಿದರು. ಬಿಜೆಪಿ ಪಕ್ಷದ ಆಡಳಿತ  ಬಂದಾಗಿನಿಂದ ಒಂದು ಬಾರಿಯೂ ಸರಿಯಾಗಿ ಕೌನ್ಸಿಲ್ ಸಭೆಗಳು ನಡೆದಿಲ್ಲ. ಇವರಿಗೆ ಆಡಳಿತ ಮಾಡಲು ಯೋಗ್ಯತೆ ಇಲ್ಲ. ದೀನ ದಲಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಏನೂ ಕೆಲಸ ಮಾಡುತ್ತಿಲ್ಲ.

ನಗರದಲ್ಲಿ ನೂರಾರು ಸಮಸ್ಯೆಗಳಿವೆ ವಿನಾ ಕಾರಣ ಸಭೆಗಳನ್ನ ಮುಂದೂಡಿಕೊಂಡು ಬರುತ್ತಿದ್ದಾರೆ. ಇನ್ನೂ ಪಾಲಿಕೆ ಬಜೆಟ್ ಕೂಡ ಮಂಡಿಸಿಲ್ಲ. ಯಾವಾಗ ಇವರು ಮಾಡೋದು.? ಇನ್ನೇನು ಚುನಾವಣೆ ಬರುತ್ತೆ ಆಮೇಲೇನು ಮಾಡ್ತಾರೆ ಇವರು. ಇವರಿಂದ ನಮ್ಮ ವಾರ್ಡ್ ನ ಜನರ ಸಮಸ್ಯೆಗಳ ಪರಿಹಾರ ಮಾಡುಲು ಆಗುತ್ತಿಲ್ಲ. ನಮಗೆ ಜನ ಛೀಮಾರಿ ಹಾಕುತ್ತಿದ್ದಾರೆ. ಈ ಕೂಡಲೇ ಸಭೆ ಕರೆಯಬೇಕು. ಇಲ್ಲ ಅಂದ್ರೆ ನೀವು ಪೂಜ್ಯ ಮಹಾ ಪೌರರು ಎಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಈ ಕೂಡಲೇ ರಾಜೀನಾಮೆ ನೀಡಿ ಎಂದು ಪಾಲಿಕೆ ಸದಸ್ಯರು ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Key words: mysore-city-corporation-mayor-protest-jds-congress

website developers in mysore