ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಛತ್ರದಲ್ಲಿ ಇವಿಎಂ ಶೇಖರಣೆ: ಮುಡಾ ಪತ್ರಕ್ಕೂ ಕ್ಯಾರೆ ಎನ್ನದ ಮೈಸೂರು ನಗರ ಪಾಲಿಕೆ…

ಮೈಸೂರು,ನ,25,2019(www.justkannada.in):  ಬಡವರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಸಿಐಟಿಬಿ ಛತ್ರದಲ್ಲಿ ಇವಿಎಂಗಳನ್ನ ಇಡಲಾಗಿದ್ದು,  ಇವಿಎಂಗಳನ್ನ ಸ್ಥಳಾಂತರಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪತ್ರ ಬರೆದು ಐದು ತಿಂಗಳು ಕಳೆದರೂ ಮೈಸೂರು ಮಹಾನಗರ ಪಾಲಿಕೆ ಮಾತ್ರ ಇತ್ತ ಗಮನ ಹರಿಸಿಲ್ಲ.

ಹೌದು, ಮೈಸೂರು ಮಹಾನಗರ ಪಾಲಿಕೆ -2018ರ ಚುನಾವಣೆಯ ಮತ ಎಣಿಕೆಯ ನಂತರ ಇವಿಎಂಗಳನ್ನ ಶೇಖರಿಸಿಡಲು ನಗರದ ಹೆಬ್ಬಾಳು 2ನೇ ಹಂತದಲ್ಲಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಿಐಟಿಬಿ ಛತ್ರವನ್ನ ತಾತ್ಕಾಲಿಕವಾಗಿ ಬಿಟ್ಟುಕೊಡಲಾಗಿತ್ತು.

ಪ್ರಾಧಿಕಾರದ ಈ ಛತ್ರವನ್ನ ಸಾರ್ವಜನಿಕರಿಗೆ ಮತ್ತು ಬಡಬಗ್ಗರಿಗೆ ಮದುವೆ ಮುಂತಾದ ಕಾರ್ಯಕ್ರಮಗಳನ್ನ ಮಾಡಲು ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತಿತ್ತು. ಆದರೆ  ಕಳೆದ ಒಂದು ವರ್ಷದಿಂದ ಈ ಕಲ್ಯಾಣ ಮಂಟಪದಲ್ಲಿ ಇವಿಎಂ ಶೇಖರಿಸಿಟ್ಟಿರುವುದರಿಂದ ಸಾರ್ವಜನಿಕರು ಮದುವೆ ಮುಂತಾದ ಕಾರ್ಯಕ್ರಮಗಳನ್ನ ಮಾಡಲು ತೊಂದರೆಯಾಗಿದೆ. ಹೀಗಾಗಿ  ಇವಿಎಂ ಸ್ಥಳಾಂತರಿಸಿ ಛತ್ರವನ್ನ ಪ್ರಾಧಿಕಾರಕ್ಕೆ ಬಿಟ್ಟುಕೊಡುವಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಕಳೆದ ಮೇ ತಿಂಗಳಿನಲ್ಲೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ ಪಾಲಿಕೆ ಮಾತ್ರ  ಇವಿಎಂ ಸ್ಥಳಾಂತರಿಸಿ ಛತ್ರವನ್ನ ಮುಡಾಗೆ ಬಿಟ್ಟುಕೊಡಲು ಮುಂದಾಗಿಲ್ಲ.

ಪಾಲಿಕೆಯ ಈ ನಡೆಯಿಂದ  ಸಾರ್ವಜನಿಕರು ಮತ್ತು ಬಡಬಗ್ಗರಿಗೆ ಅನಾನುಕೂಲವಾಗಿದ್ದು ಇವಿಎಂ ಸ್ಥಳಾಂತರಿಸಿ  ಕಲ್ಯಾಣ  ಮಂಟಪವನ್ನ ಮೂಲ ಉದ್ದೇಶಕ್ಕೆ ಬಿಟ್ಟುಕೊಡುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿ ಬಂದಿದೆ.

Key words: mysore-city corporation- CITB Chautri-MUDA-public