ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧ- ಶಾಸಕ ಎಸ್.ಎ ರಾಮದಾಸ್ ಹೇಳಿಕೆ…

ಮೈಸೂರು,ಡಿ,7,2019(www.justkannada.in): ನಾನು ಸಚಿವ ಸ್ಥಾನದ ರೇಸ್ ನಲ್ಲಿರುವ ಕುದುರೆಯಲ್ಲ. ನಾನೆಂದು ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ  ಕೊಟ್ಟರೂ ನಿರ್ವಹಿಸುತ್ತೇನೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್,  ಡಿ.‌9ರ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರೂ ಮ್ಯಾಜಿಕ್ ಮಾಡ್ತೀವಿ, ರಾಜಕೀಯ ಬದಲಾವಣೆ ಎನ್ನುತ್ತಿದ್ದಾರೆ. ಆದ್ರೆ ಜನ ಅದನ್ನು ಸುಳ್ಳು ಮಾಡ್ತಾರೆ. ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ 9 ರಿಂದ 10 ಸ್ಥಾನಗಳನ್ನ ಗೆಲ್ಲುತ್ತದೆ. ಇನ್ನೂ ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಎ ರಾಮದಾಸ್,  ಈಗಾಗಲೇ ಹೊರಗಿನಿಂದ ಬಂದ 15ರಲ್ಲಿ 13ಜನಕ್ಕೆ ಟಿಕೇಟ್ ನೀಡಿದ್ದೇವೆ. ಗೆಲ್ಲುವ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ವರಿಷ್ಠರು ತಿಳಿಸಿದ್ದಾರೆ. ಉಳಿದ ಸ್ಥಾನಗಳನ್ನು ಪಕ್ಷದ ವರಿಷ್ಠರು ನಿರ್ಧರಿಸಿ ಅರ್ಹರಿಗೆ ನೀಡುತ್ತಾರೆ. ನಾನು ಸಚಿವ ಸ್ಥಾನದ ರೇಸ್ ನಲ್ಲಿರುವ ಕುದುರೆಯಲ್ಲ. ನಾನೆಂದು ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಪಕ್ಷದ ಕಾರ್ಯಕರ್ತರೊಂದಿಗೆ ನಾನೊಬ್ಬ ಸ್ವಯಂ ಸೇವಕ. ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ ಎಂದು ನುಡಿದರು.

Key words: mysore- BJP MLA-SA Ramadas-responsibility -highcommend