ದಕ್ಷಿಣ ಪದವೀಧರ ಕ್ಷೇತ್ರ : ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ.

 

ಮೈಸೂರು, ಸೆ.22, 2021 : (www.justkannada.in news ) ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿಗೆ ಅಧಿಸೂಚನೆ ಹೊರಡಿಸಲು ದಿನಗಣನೆ ಶುರುವಾಗುತ್ತಿದ್ದಂತೆ, ಆಡಳಿತಾರೂಢ ಬಿಜೆಪಿಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ.

ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ.ರವಿಶಂಕರ್ ಅವರು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಜತೆಗೆ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಲು ಇತರೆ ಆಕಾಂಕ್ಷಿಗಳು ತಮ್ಮದೇ ತಂತ್ರಗಾರಿಕೆಯ ಮೂಲಕ ಹೈಕಮಾಂಡ್ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ, ದಕ್ಷಿಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಗೋ.ಮಧುಸೂದನ್ ಅವರ ಬದಲು ಮೈ.ವಿ.ರವಿಶಂಕರ್ ಅವರಿಗೆ ಟಿಕೆಟ್ ಕೊಟ್ಟಿತ್ತು. ಜಾ.ದಳದಿಂದ ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್‌ನಿಂದ ಹಾಸನ ಜಿಲ್ಲೆಯ ಡಾ.ರವೀಂದ್ರ ಅವರನ್ನು ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ ಕೆ.ಟಿ.ಶ್ರೀಕಂಠೇಗೌಡ ಆಯ್ಕೆಯಾದರೆ, ಮೈ.ವಿ.ರವಿಶಂಕರ್ ಪರಾಭವಗೊಂಡಿದ್ದರು.
ಕಳೆದ ಬಾರಿ ಪರಾಭವಗೊಂಡಿದ್ದ ಮೈ.ವಿ.ರವಿಶಂಕರ್, ಮೂರು ದಶಕಗಳಿಂದ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ರಾಜ್ಯ,ರಾಷ್ಟ್ರ ಮಟ್ಟದ ನಾಯಕರ ಜತೆಗೆ ಸಂಪರ್ಕ ಹೊಂದಿದ್ದು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.

ಪೂರ್ವಭಾವಿ ಸಭೆ ನಡೆಸುತ್ತಿರುವ ಈಸಿನಿಂ :

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ ಅವರು ಟಿಕೆಟ್ ಸಿಗುವ ಭರವಸೆ ಇಟ್ಟುಕೊಂಡು ಈಗಾಗಲೇ ಪ್ರವಾಸ ಆರಂಭಿಸಿದ್ದಾರೆ. ಬೆಂಬಲಿಗರು,ಆಪ್ತರ ಬೆಂಬಲದೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸೇರಿರುವ ನಿಂಗರಾಜೇಗೌಡ ಅವರು ಡಾ.ಸಿ.ಎನ್.ಅಶ್ವಥ್‌ನಾರಾಯಣ್, ಆರ್.ಅಶೋಕ್ ಸೇರಿ ಅನೇಕರ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಜತೆಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜತೆಗೂ ಅವಿನಾಭಾವ ಸಂಬಂಧ ಹೊಂದಿರುವುದು ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಸಾಮಾಜಿಕ ಸೇವೆಯಿಂದ ರಾಜಕೀಯ ಕಡೆಗೆ:

ಹಲವು ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿರುವ ಮೈಸೂರಿನ ಕಾವೇರಿ ಆಸ್ಪತ್ರೆ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್  ಈಗ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಬಯಸಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಎರಡು ಬಾರಿ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದು,  ಫೆಡರೇಷನ್ ಆಫ್ ಹಾಸ್ಪಿಟಲ್ ಅಸೋಸಿಯೇಷನ್ ಕರ್ನಾಟಕದ ಕಮಿಟಿ ಮೆಂಬರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ‘ ಮಹಾನ್ ‘ ಸಂಸ್ಥೆಯ ಫೌಂಡರ್ ಟ್ರಸ್ಟೀ ಆಗಿರುವ, ಒಕ್ಕಲಿಗ ಸಮುದಾಯದ ಡಾ.ಜಿ.ಆರ್.ಚಂದ್ರಶೇಖರ್, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಟಿಕೆಟ್ ಬಯಸಿದ್ದಾರೆ.

ಸದ್ದಿಲ್ಲದೆ ಪ್ರಚಾರ:

ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಗಳನ್ನೊಳಗೊಂದ ದಕ್ಷಿಣ ಪದವೀಧರ ವೇದಿಕೆ ರಚನೆ ಮಾಡಿಕೊಂಡು ಒಂದು ವರ್ಷದಿಂದ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಎನ್.ಎಸ್.ವಿನಯ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಟಿಕೆಟ್ ಸಿಗುವ ನಂಬಿಕೆಯಲ್ಲಿ ನಟ ಪ್ರೇಮ್ ಅವರ ಮೂಲಕ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಸಂವಾದ ನಡೆಸುವ ಮೂಲಕ ಮತದಾರರ ಗಮನಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ವೀರಶೈವ ಸಮುದಾಯಕ್ಕೆ ಸೇರಿದ ವಿನಯ್ ಈ ಬಾರಿ ತಮ್ಮ ನಾಯಕರ ಮೂಲಕ ಟಿಕೆಟ್ ಪಡೆಯಲು ಮುಂದಾಗಿದ್ದಾರೆ.

ಪೈಪೋಟಿಗೆ ಕಾರಣವಿದು :

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವ ಜತೆಗೆ, ೨೦೧೮ರ ನಂತರದಲ್ಲಿ  ಆರು ಮಂದಿ ಬಿಜೆಪಿ ಶಾಸಕರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮೂವರು, ಚಾಮರಾಜನಗರ ಜಿಲ್ಲೆ,ಮಂಡ್ಯ,ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬ ಶಾಸಕರು ಇರುವುದರಿಂದ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯಲು ಹೆಚ್ಚು ಒಲವು ತೋರುವುದಕ್ಕೆ ಕಾರಣವಾಗಿದೆ.

key words : Mysore-bjp-election-competition-Karnataka