ಮೈಸೂರು ಅಥ್ಲೆಟ್ಸ್ ಕ್ಲಬ್ ಲೋಗೋ-ಸೈಕ್ಲಿಂಗ್ ಜೆರ್ಸಿ ಬಿಡುಗಡೆ

ಮೈಸೂರು, ಮೇ 31, 2023 (www.justkannada.in): ಮೈಸೂರು ಅಥ್ಲೆಟ್ಸ್ ಕ್ಲಬ್’ನಿಂದ ‘ಮೈಸೂರು ಸೈಕ್ಲಿಂಗ್ ಜೆರ್ಸಿ’ ಹಾಗೂ ಲೋಗೊ ಬಿಡುಗಡೆ ಕಾರ್ಯಕ್ರಮ ನಗರದ ರಿಯೋ ಮೆರಿಡಿಯನ್ ಹೋಟೆಲ್‌ನಲ್ಲಿ ನಡೆಯಿತು.

ಮೈಸೂರು  ಅಥ್ಲೆಟ್ಸ್ ಕ್ಲಬ್ ನಿಂದ ವಿನ್ಯಾಸ ಗೊಳಿಸಿರುವ ಹೊಸ ಸೈಕ್ಲಿಂಗ್ ಜೆರ್ಸಿ ಹಾಗೂ ಲೋಗೊವನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣ ಮಾಡಿದರು.

ನಂತರ ಮಾತನಾಡಿದ ಯದುವೀರ್,  ಉತ್ತಮ ಆರೋಗ್ಯಕರ ಜೀವನ ಶೈಲಿಗೆ ಪೂರಕವಾಗಿ ಹಮ್ಮಿಕೊಂಡಿರುವ ಈ ಕಾರ‍್ಯಕ್ರಮ ತುಂಬಾ ಖುಷಿ ನೀಡಿದೆ. ಮೈಸೂರಿನಲ್ಲಿ ಉತ್ತಮ ಆರೋಗ್ಯಕ್ಕೆ ಪೂರಕವಾದ ಹಲವಾರು ಚಟುವಟಿಕೆಗಳನ್ನು ರಾಜವಂಶಸ್ಥರು ಮಾಡಿಕೊಂಡು ಬಂದಿದ್ದಾರೆ. ಉದಾಹರಣೆಗೆ ಯೋಗ, ಕುಸ್ತಿ ಮುಂತಾದ ಆರೋಗ್ಯಕರ ಚಟುವಟಿಕೆಗಳಿಗೆ ಅರಮನೆಯ ಕೊಡುಗೆ ತುಂಬಾ ಇದೆ ಎಂದು ಹೇಳಿದರು.

ಆಧುನಿಕ ಯೋಗಕ್ಕೂ ಮೈಸೂರು ತುಂಬಾ ಕೊಡುಗೆ ನೀಡುತ್ತಿದೆ. ಇದು ಮೈಸೂರಿಗರಲ್ಲಿ ಆರೋಗ್ಯಕರ ಜೀವನ ಶೈಲಿಗೆ ಅನುಕೂಲಕರವಾಗಿರುವುದನ್ನು ಒಪ್ಪಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಓಟ ಹಾಗೂ ಸೈಕ್ಲಿಂಗ್ ಹವ್ಯಾಸ ಹೆಚ್ಚುತ್ತಿರುವುದು ಉತ್ತಮ ಬೆಳೆವಣಿಗೆ. ಈ ನಿಟ್ಟಿನಲ್ಲಿ ಮೈಸೂರು ಅಥ್ಲೆಟ್ಸ್ ಕ್ಲಬ್ ಉತ್ತಮ ವೇದಿಕೆ ಸೃಷ್ಟಿಮಾಡಿಕೊಡುತ್ತಿರುವುದು ಸಂತೋಷದ ವಿಷಯ ಎಂದರು.

ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತರೂ ಆದ ಮೈಸೂರು ಅಥ್ಲೆಟ್ಸ್ ಸದಸ್ಯ ರಮೇಶ್ ನರಸಯ್ಯ, ಪ್ರಸ್ತಾವಿಕವಾಗಿ ಮಾತನಾಡಿದರು. ಹೆವೆನ್ಲಿ ಟೈಲರ್ಸ್ ನ ಎಂ ಎನ್ ಪದ್ಮರಾಜು, ಕಲಿಸು ಫೌಂಡೇಶನ್ ನಿಖಿಲೇಶ್, ಯಶ್ವಂತ್, ಕಿರಣ್,  ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಮಂಜುನಾಥ,  ಜೆ.ಎಸ್.ಎಸ್ ಆಯುರ್ವೇದಿಕ ಕಾಲೇಜಿನ ಆಡಳಿತಾಧಿಕಾರಿ ವಿಕಾಸ್ ನ್ಯಾಂಡಿ, ಮಂಡ್ಯ ಡಯಟ್’ನ ಉಪನ್ಯಾಸಕ ಭಾನುಕುಮಾರ ಆರ್ ಇತರರು ಇದ್ದರು.