ಅಜ್ಜನ ಮನೆ ಸಂಸ್ಥೆ ವತಿಯಿಂದ ನ. 6ರಂದು ಕಾರ್ತಿಕ ಸಂಭ್ರಮ ಕಾರ್ಯಕ್ರಮ..

ಮೈಸೂರು, ನವೆಂಬರ್,3,2022(www.justkannada.in): ಮೈಸೂರಿನ ಕಲಾ ಪ್ರಪಂಚ ಅಜ್ಜನ ಮನೆ ಸಂಸ್ಥೆ ವತಿಯಿಂದ  ನ.6ರಂದು ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಸೂರ್ಯೋದಯದಿಂದ ಚಂದ್ರೋದಯದವರೆಗೆ  ಶೀರ್ಷಿಕೆಯಡಿ ಕಾರ್ತಿಕ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೃಷ್ಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು 12 ಗಂಟೆಗಳ ಅವಧಿಯಲ್ಲಿ ಮೈಸೂರಿನ ವಿವಿಧ ಕಲಾ ಶಾಲೆಯ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಜೊತೆಗೆ ವಿಶೇಷ ಚೇತನ ಮಕ್ಕಳು ಮೂರು ಗಂಟೆಗಳ ಕಾಲ ಕಾರ್ಯಕ್ರಮ ನೀಡಲಿದ್ದಾರೆ ಎಂದು ಅವರು ಹೇಳಿದರು.

ವಿದ್ವಾನ್ ಕೃಷ್ಣಮೂರ್ತಿ ಶಿಷ್ಯರಿಂದ ಮಂಗಳ ವಾದ್ಯ, ಡಾ.ಶ್ರೀಶಾ ಭಟ್ ಶಿಷ್ಯರಿಂದ ಚಂಡೆವಾದನ, ಡಾ.ಕೃಪಾಫಡ್ಕೆ ಶಿಷ್ಯರಿಂದ ಭರತನಾಟ್ಯ, ಅಮ್ಮ ರಾಮಚಂದ್ರ ಅವರ ನೇತೃತ್ವದಲ್ಲಿ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಜಾನಪದ ಹಾಡುಗಳು, ಕವಿತಾ ಧನಂಜಯ ಅವರ ಶಿಷ್ಯರಿಂದ ನಾಟಕ, ಗಾನಭಾರತೀ ಕಲಾ ಶಾಲೆಯ ಮಕ್ಕಳಿಂದ ವಾದ್ಯವೃಂದ, ಸಂಧ್ಯಾಭಟ್ ಶಿಷ್ಯರಿಂದ ಹಿಂದೂಸ್ತಾನಿ ಸಂಗೀತ, ನಾಗಶ್ರೀ ಫಣಿ ಶಿಷ್ಯರಿಂದ ಜಾನಪದ ನೃತ್ಯ, ವಿದ್ವಾನ್ ವಿ.ಎಸ್.ರಮೇಶ್ ಶಿಷ್ಯರಿಂದ ತಾಳವಾದ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿವೆ.

ರಂಗರಾವ್ ಸ್ಮಾರಕ ವಿಶೇಷ ಚೇತನ ಶಾಲಾ ವಿದ್ಯಾರ್ಥಿಗಳಿಂದ ಹಾಡು ಮತ್ತು ನೃತ್ಯ, ಮೈತ್ರಿ ಬುದ್ದಿ ಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಹಾಡುಗಾರಿಕೆ, ಇನ್ಸ್ಟಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಶಾಲಾ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನವಿದೆ ಎಂದು ಅವರು ಮಾಹಿತಿ ನೀಡಿದರು. ಸಂಸ್ಥೆಯ ಸುಮ ಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Key words:  mysore-ajjana mane-karthika sambrama