ಮಲ್ಟಿಪ್ಲೆಕ್ಸ್ ಸುಲಿಗೆಗೆ ಸರ್ಕಾರದ ಮೂಗುದಾರ: ಎಂಆರ್​ಪಿ ದರದಲ್ಲೇ ತಿಂಡಿ, ಪಾನೀಯ, ನೀರು ಮಾರಾಟಕ್ಕೆ ಆದೇಶ

ಬೆಂಗಳೂರು:ಜುಲೈ-15: ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್​ಪಿ) ಮೂರ್ನಾಲ್ಕು ಪಟ್ಟು ಅಧಿಕ ಬೆಲೆಗೆ ತಿಂಡಿ-ತಿನಿಸು, ಪಾನೀಯ, ಕುಡಿಯುವ ನೀರು ಮಾರಾಟ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಮಲ್ಟಿಪ್ಲೆಕ್ಸ್ ಗಳಿಗೆ ಮೂಗುದಾರ ಹಾಕಲು ಸರ್ಕಾರ ಕೊನೆಗೂ ಮುಂದಾಗಿದ್ದು, ಇನ್ಮುಂದೆ ಎಂಆರ್​ಪಿ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡಬೇಕೆಂದು ಮಹತ್ವದ ಆದೇಶ ಹೊರಡಿಸಿದೆ. ಜು. 2ರಂದು ನಡೆದ ಶಾಸನ ರಚನಾ ಸಭೆಯಲ್ಲಿ ಸಮಿತಿಯೊಂದರ ಶಿಫಾರಸಿನ ಅನ್ವಯ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಮಲ್ಟಿಪ್ಲ್ಲೆಕ್ಸ್ ಚಿತ್ರಮಂದಿರಗಳು ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳನ್ನು ಎಂಆರ್​ಪಿ ದರದಲ್ಲೇ ಮಾರಾಟ ಮಾಡುವ ನಿಯಮವನ್ನು ಜಾರಿಗೆ ತರುವಂತೆ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ 1964 ಸೆಕ್ಷನ್ 14ರ ಅನ್ವಯ ಚಿತ್ರಮಂದಿರ ಗಳ ಪರವಾನಗಿ ಪ್ರಾಧಿಕಾರಗಳಿಗೆ ಒಳಾಡಳಿತ ಇಲಾಖೆ ಆದೇಶಿಸಿದೆ.

ಪರವಾನಗಿಗೆ ಎಂಆರ್​ಪಿ ಷರತ್ತು: ಬ್ರ್ಯಾಂಡೆಡ್ ಕಂಪನಿಗಳ ಕುಡಿಯುವ ನೀರು, ಬಿಸ್ಕತ್, ಚಿಪ್ಸ್, ಕೂಲ್ ಡ್ರಿಂಕ್ಸ್​ಗೆ ಮಾರುಕಟ್ಟೆ ದರಕ್ಕಿಂತ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಇವು ಎಂಆರ್​ಪಿ ದರದಲ್ಲೇ ಗ್ರಾಹಕರಿಗೆ ದೊರೆಯುವಂತಾಗಬೇಕು.

ಸ್ವಂತ ಬ್ರ್ಯಾಂಡ್​ಗೂ ಏಕದರ

ಮಲ್ಟಿಪ್ಲೆಕ್ಸ್​ಗಳು ಸೇರಿ ಚಿತ್ರಮಂದಿರಗಳಲ್ಲಿ ಅವರದೇ ಬ್ರ್ಯಾಂಡ್​ನ ತಿಂಡಿ-ತಿನಿಸು, ತಂಪು ಪಾನೀಯ ಹಾಗೂ ನೀರಿನ ಬಾಟಲಿಗಳ ಮಾರಾಟಕ್ಕೆ ಮನಸ್ಸಿಗೆ ಬಂದಷ್ಟು ದರ ವಿಧಿಸಿ ಗ್ರಾಹಕರಿಂದ ಸುಲಿಗೆ ಮಾಡಲಾಗುತ್ತಿದೆ. ಇನ್ನುಮುಂದೆ ಸ್ವಂತ ಬ್ರ್ಯಾಂಡ್​ನ ಪದಾರ್ಥಗಳಿಗೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಗಳಿಗೆ ಸಮಾನಾಂತರವಾಗಿ ಏಕರೀತಿಯ ದರವನ್ನು ನಿಗದಿಪಡಿಸಿ ಮಾರಾಟ ಮಾಡಬೇಕು ಎಂದು ನಿರ್ದೇಶಿಸಿದೆ.

ಬಿಲ್ ಕೊಡದಿರುವುದು, ಜಿಎಸ್​ಟಿ ನಿಯಮ ಪಾಲಿಸದವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಎಂಆರ್​ಪಿ ದರದಲ್ಲೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕೆಂಬ ಸರ್ಕಾರದ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇತರೆ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸಹಕಾರ ಕೊಡಲಾಗುತ್ತದೆ.

| ನಿತೇಶ್ ಪಾಟೀಲ್ ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಎಂಆರ್​ಪಿ ದರಕ್ಕಿಂತ ಅಧಿಕ ಹಣ ವಸೂಲಿ ಮಾಡುವವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗುತ್ತಿದೆ. 2 ವರ್ಷದಲ್ಲಿ 42 ಪ್ರಕರಣ ದಾಖಲಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ದಂಡ ವಿಧಿಸಿ, ಮತ್ತೆ ಕೆಲ ಪ್ರಕರಣಗಳಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈಗ ಸರ್ಕಾರದ ಹೊಸ ಆದೇಶದಂತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ.

| ರಾಮಯ್ಯ ಡೆಪ್ಯುಟಿ ಕಂಟ್ರೋಲರ್, ಕಾನೂನು ಮಾಪನ ಶಾಸ್ತ್ರ ಇಲಾಖೆ
ಕೃಪೆ:ವಿಜಯವಾಣಿ

ಮಲ್ಟಿಪ್ಲೆಕ್ಸ್ ಸುಲಿಗೆಗೆ ಸರ್ಕಾರದ ಮೂಗುದಾರ: ಎಂಆರ್​ಪಿ ದರದಲ್ಲೇ ತಿಂಡಿ, ಪಾನೀಯ, ನೀರು ಮಾರಾಟಕ್ಕೆ ಆದೇಶ
multiplex-theater-film-sandalwood-state-govt