ಇ-ಹರಾಜಿನಲ್ಲಿ ತಪ್ಪಾದ ನಿವೇಶನ ಹಂಚಿಕೆ : ನೋಂದಣಿ ಶುಲ್ಕ ಹಿಂದಿರುಗಿಸಲು MUDA ಗೆ ಆದೇಶ.

MUDA-directed to refund registration charges.

 

ಮೈಸೂರು, ಆಗಸ್ಟ್ ೧೦, ೨೦೨೨ (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮೈಸೂರಿನ ನಿವಾಸಿಯೊಬ್ಬರಿಗೆ ಇ-ಹರಾಜಿನಲ್ಲಿ ತಪಾದ ನಿವೇಶನವನ್ನು ಹಂಚಿಕೆ ಮಾಡಿತ್ತು. ವಿವಾದ ಬಹಿರಂಗಗೊಂಡ ನಂತರ ಮುಡಾ ಆ ಗ್ರಾಹಕರಿಗೆ ಪರ್ಯಾಯ ನಿವೇಶನವನ್ನೂ ಹಂಚಿಕೆ ಮಾಡಿತ್ತು. ಆದರೆ ಮೈಸೂರು ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ನಿವಾರಣಾ ಆಯೋಗವು ಈ ಹಿಂದೆ ಗ್ರಾಹಕರು ನಿವೇಶನ ಖರೀದಿಸಲು ಭರಿಸಿದ್ದಂತಹ ನೋಂದಣಿ ಶುಲ್ಕವನ್ನು ಅವರಿಗೆ ಹಿಂದಿರುಗಿಸುವಂತೆ ಆಯೋಗಕ್ಕೆ ನಿರ್ದೇಶಿಸಿದೆ.

ಮೈಸೂರಿನ ಹುಣಸೂರು ರಸ್ತೆಯ ಬೆಳವಾಡಿಯ ನಿವಾಸಿ, ೩೮-ವರ್ಷದ ಹೆಚ್.ಆರ್. ಪ್ರಶಾಂತ್ ಅವರಿಗೆ ಮುಡಾ ವತಿಯಿಂದ ನಡೆದಂತಹ ಇ-ಹರಾಜಿನಲ್ಲಿ ಮೈಸುರಿನ ಹೆಬ್ಬಾಳ ೨ನೇ ಹಂತದಲ್ಲಿ ೫.೮ x ೭.೬ ಮೀ. ಅಳತೆಯ ನಿವೇಶನ ಹಂಚಿಕೆ ಮಾಡಿತ್ತು. ರೂ.೧೩.೦೫ ಲಕ್ಷ ಮೌಲ್ಯದ ನಿವೇಶನಕ್ಕೆ ರೂ.೧೪.೬೫ ಲಕ್ಷ ಹರಾಜು ಮೊತ್ತವಾಗಿತ್ತು. ೨೦೧೮ರಲ್ಲಿ ಗ್ರಾಹಕರು ನಿವೇಶನವನ್ನು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ, ತಮ್ಮ ನಿವೇಶನಕ್ಕೆ ಕಾಂಪೌಂಡ್ ನಿರ್ಮಿಸಲು ಹೋದಾಗ, ಓರ್ವ ವ್ಯಕ್ತಿಯು ಆ ನಿವೇಶನದ ಮಾಲೀಕ ತಾನು ಎಂದು ಗಲಾಟೆ ತೆಗೆದು ಇವರನ್ನು ತಡೆದಿದ್ದರು. ಈ ವಿಷಯವನ್ನು ಮುಡಾದಲ್ಲಿ ಉಲ್ಲೇಖಿಸಿದಾಗ, ತಮಗೆ ಮುಡಾಗೆ ಸೇರಿರದ ನಿವೇಶನ ಹಂಚಿಕೆ ಮಾಡಿರುವ ಸುದ್ದಿ ಬಹಿರಂಗವಾಯಿತು. ಆದರೆ ಮುಡಾ, ಪ್ರಶಾಂತ್ ಅವರ ಹೆಸರಲ್ಲಿ ನಿವೇಶನದ ನೋಂದಣಿಯನ್ನು ಮಾಡಿಸಿರುವುದಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ ಖಾತಾವನ್ನೂ ಸೃಷ್ಟಿಸಿ ಆಸ್ತಿ ತೆರಿಗೆಯನ್ನೂ ಸಂಗ್ರಹಿಸಿತ್ತು.

ಹಾಗಾಗಿ ಪ್ರಶಾಂತ್ ಅವರಿಗೆ ಸೇಲ್ ಡೀಡ್ ಹಾಗೂ ಸಾಲದ ಒಪ್ಪಂದವನ್ನು ರದ್ದುಪಡಿಸಿ, ಪರ್ಯಾಯ ನಿವೇಶನ ಕೋರಿ ಅರ್ಜಿ ಸಲ್ಲಿಸುವಂತೆ ಮುಡಾ ಸೂಚಿಸಿತು. ಜೊತೆಗೆ, ೨೦೨೧ರ ಮಾರ್ಚ್ನಲ್ಲಿ ಹೆಬ್ಬಾಳ ೨ನೇ ಹಂತದಲ್ಲಿಯೇ ಮುಂಚೆಗಿಂತಲೂ ದೊಡ್ಡ ಅಳತೆಯ ಅಂದರೆ ೬ x ೯ ಮೀ. ಅಳತೆ ನಿವೇಶನವನ್ನು ರೂ.೧೭.೯೪ ಲಕ್ಷಕ್ಕೆ ನಿಗಧಿಪಡಿಸಿತು. ಆಗಲೂ ಸಹ ಗ್ರಾಹಕರು ನಿವೇಶನದ ನೋಂದಣಿ ಶುಲ್ಕ ಹಾಗೂ ಇನ್ನಿತರೆ ಶುಲ್ಕಗಳ ಜೊತೆಗೆ ಖಾತಾ ವರ್ಗಾವಣೆ ಸಮಯದಲ್ಲಿ ಮುಡಾಗೆ ತೆರಿಗೆಗಳನ್ನೂ ಸಹ ಪಾವತಿಸಿ ನಿವೇಶನವನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಆದರೆ ಪ್ರಶಾಂತ್ ಅವರು ೨೦೨೧ರ ನವೆಂಬರ್‌ನಲ್ಲಿ, ಮುಡಾದ ಸೇವೆಗಳಲ್ಲಿ ಆಗಿರುವ ಲೋಪಗಳ ವಿರುದ್ಧ ಗ್ರಾಹಕರ ಆಯೋಗದ ಮೊರೆ ಹೋಗಿ, ಹಿಂದೆ ಅವರು ಖರೀದಿಸಿದ ನಿವೇಶನಕ್ಕೆ ಅವರು ಪಾವತಿಸಿದ ಶುಲ್ಕ ಹಾಗೂ ವೆಚ್ಚ ಸೇರಿದಂತೆ ರೂ.೧೬.೩೩ ಲಕ್ಷ ಸೇವಾ ಲೋಪ ಶುಲ್ಕವಾಗಿ ಪಾವತಿಸುವಂತೆ ಕೋರಿದರು. ಗ್ರಾಹಕರ ಆಯೋಗವು ಗ್ರಾಹಕರು ಕೋರಿದಂತಹ ರೂ.೧೬.೩೩ ಲಕ್ಷ ಮೊತ್ತ ಬಹಳ ಉತ್ಪ್ರೇಕ್ಷಿತ ಮೊತ್ತವಾಗಿರುವುದಾಗಿ ತಿಳಿಸಿತು. ಆದರೆ ಗ್ರಾಹಕರಿಗೆ ಮುಡಾ ಹಿಂದಿನ ನಿವೇಶನ ನೋಂದಣಿ ಶುಲ್ಕವನ್ನು ಹಿಂದಿರುಗಿಸಲು ನಿರಾಕರಿಸಿದ ಮುಡಾದ ಸೇವ ಲೋಪವನ್ನೂ ಪರಿಗಣಿಸಿತು.

ಈ ಹಿನ್ನೆಲೆಯಲ್ಲಿ ಬಿ. ನಾರಾಯಣಪ್ಪ ಅವರ ಅಧ್ಯಕ್ಷತೆ ಹಾಗೂ ಸದಸ್ಯರಾದ ಲಲಿತಾ ಎಂ.ಕೆ. ಹಾಗೂ ಮಾರುತಿ ವಡ್ಡರ್ ಅವರ ನೇತೃತ್ವದ ಮೈಸೂರು ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ನಿವಾರಣಾ ಆಯೋಗ, ಜುಲೈ ೩೦, ೨೦೨೨ರ ತಮ್ಮ ಆದೇಶದಲ್ಲಿ ರೂ. ೭೪,೮೭೦ ನೋಂದಣಿಗಾಗಿ ಸ್ಟ್ಯಾಂಪ್ ಡ್ಯೂಟಿ ಶುಲ್ಕ, ರೂ. ೧೪,೬೫೦ ನೋಂದಣಿ ಶುಲ್ಕ, ರೂ.೧೦,೦೦೦ ಇತರೆ ವೆಚ್ಚಗಳು, ರೂ.೮,೫೪೯ ನಿವೇಶನ ಹಾಗೂ ಖಾತಾ ಶುಲ್ಕಗಳು ಹಾಗೂ ರೂ.೯೭,೭೦೫ ಟೈಟಲ್ ಡೀಡ್ ರದ್ದು ಶುಲ್ಕ ಒಳಗೊಂಡಂತೆ ಒಟ್ಟು ರೂ.೨,೦೫,೭೭೪ ಅನ್ನು ಗ್ರಾಹಕರಿಗೆ ಹಿಂದಿರುಗಿಸಬೇಕೆಂದು ಆದೇಶಿಸಿದೆ.

ಈ ಮೊತ್ತವನ್ನು ಎರಡು ತಿಂಗಳೊಳಗೆ ಮುಡಾ ಗ್ರಾಹಕರಿಗೆ ಹಿಂದಿರುಗಿಸಬೇಕಾಗಿಯೂ ತಪ್ಪಿದಲ್ಲಿ, ಮಾರ್ಚ್ ೨೩, ೨೦೨೧ರಿಂದ ಅನ್ವಯಿಸುವಂತೆ ಹಣ ಪಾವತಿಸುವ ಅವಧಿಯವರೆಗೆ ಮಾಸಿಕ ಶೇ.೬ ಬಡ್ಡಿಯನ್ನೂ ಪಾವತಿಸುವಂತೆ ಆದೇಶಿಸಿದೆ.

ಮುಂದುವರೆದು, ಗ್ರಾಹಕರು ಅನುಭವಿಸಿದ ಮಾನಸಿಕ ಹಿಂಸೆಗೆ ರೂ.೫,೦೦೦ ಪರಿಹಾರ ಹಾಗೂ ಮೊಕದ್ದಮೆಯ ದರವಾಗಿ ರೂ.೩,೦೦೦ ಹೆಚ್ಚುವರಿಯಾಗಿ ಆದೇಶ ಹೊರಡಿಸಿದ ಎರಡು ತಿಂಗಳೊಳಗೆ ಪಾವತಿಸಬೇಕೆಂದು ಆದೇಶಿಸಿದೆ.

ಸುದ್ದಿ ಮೂಲ: ದಿ ಹಿಂದೂ

KEY WORDS : MUDA-directed to refund registration charges.

 

ENGLISH SUMMARY : 

after allotting wrong site to bidder in e-auction, MUDA directed to refund registration charges

Consumer Disputes Redressal Commission gives it two months’ time. Mysuru Urban Development Authority (MUDA) allotted an alternative site to a resident of Mysuru, who had been given a wrong site during an e-auction, it has been directed by the Mysuru District Consumer Disputes Redressal Commission to refund the registration charges that the allottee had borne for the earlier site.