ಅತಿಥಿಗೃಹದಲ್ಲಿ ಫ್ಲೆಕ್ಸ್ ಅನಾವರಣಗೊಳಿಸಿ ಸಂಸದ ಪ್ರತಾಪ್ ಸಿಂಹ ಹುಟ್ಟುಹಬ್ಬ ಆಚರಣೆ: ಕ್ಷಮೆ ಕೇಳಲು ಆಗ್ರಹಿಸಿದ ಕೆಪಿಸಿಸಿ ವಕ್ತಾರ.

ಮೈಸೂರು,ಜೂನ್,23,2021(www.justkannada.in):  ಪಾರಂಪರಿಕ ಕಟ್ಟಡದ ಬಗ್ಗೆ ಬಹಳವಾಗಿ ಮಾತನಾಡುವ ಸಂಸದ ಪ್ರತಾಪಸಿಂಹ ಅವರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಜಲದರ್ಶಿನಿ ಅತಿಥಿಗೃಹದಲ್ಲಿ ಫ್ಲೆಕ್ಸ್ ಗಳನ್ನು ಅನಾವರಣಗೊಳಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೀಗಾಗಿ ಅವರು ಜನರ ಬಳಿ ಕ್ಷಮೆ ಕೇಳಲಿ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಆಗ್ರಹಿಸಿದರು.jk

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್, ಜಲದರ್ಶಿನಿ, ಸರ್ಕಾರಿ ಅತಿಥಿಗೃಹ ಸೇರಿದಂತೆ ಅನೇಕ ಪಾರಂಪರಿಕ ಅತಿಥಿಗೃಹಗಳಲ್ಲಿ ಲೋಕಸಭೆ, ವಿಧಾನಸಭೆ, ವಿಧಾನಪರಿಷತ್ ಸದಸ್ಯರುಗಳಿಗೆ ಅಧಿಕೃತ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ.

ರಾಜಮನೆತನದವರ ದೂರದೃಷ್ಟಿ ಫಲವಾಗಿ ಮೈಸೂರಿನಲ್ಲಿ ಸುಂದರ ಆಕರ್ಷಣೆಯ ಅತಿಥಿ ಗೃಹಗಳು ನಿರ್ಮಾಣಗೊಂಡಿವೆ.  ಅತಿಥಿ ಗೃಹಗಳ ನಿರ್ಮಾಣದ ಉದ್ದೇಶ ಸ್ಪಷ್ಟವಾಗಿತ್ತು. ಮೈಸೂರು ಪ್ರವಾಸಿಗರ ತಾಣ. ಉನ್ನತ ಅಧಿಕಾರಿಗಳು ಸೇರಿದಂತೆ ದೇಶವಿದೇಶಗಳಿಂದ ಅತಿಥಿಗಳು ಮೈಸೂರಿಗೆ ಹೆಚ್ಚಾಗಿ ಬರುತ್ತಾರೆ ಇದಕ್ಕೆ ವಿಶ್ವವಿಖ್ಯಾತ ದಸರಾ ಕೂಡ ಕಾರಣ.

ಇತ್ತೀಚಿನ ದಿನಗಳಲ್ಲಿ ಅತಿಥಿ ಗೃಹಗಳನ್ನು ಜನಪ್ರತಿನಿಧಿಗಳ ಇಚ್ಛಾನುಸಾರ ಮಾರ್ಪಾಡು ಮಾಡಲಾಗಿದೆ. ಪಾರಂಪರಿಕ ಕಟ್ಟಡದಲ್ಲಿ ಪುರತತ್ವ ಇಲಾಖೆಯ ಅನುಮತಿ ಇಲ್ಲದೆ ಈಜುಕೊಳ ನಿರ್ಮಿಸಿ ರೋಹಿಣಿ ಸಿಂಧೂರಿ ಅವರು ಸುದ್ದಿಯಲ್ಲಿದ್ದಾರೆ.

ಸಂಸತ್ ಸದಸ್ಯ ಪ್ರತಾಪಸಿಂಹ ಅವರು ಈ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಆರೋಪ ಕೂಡ ಮಾಡಿದ್ದಾರೆ. ಪಾರಂಪರಿಕ ಕಟ್ಟಡದ ಬಗ್ಗೆ ಬಹಳವಾಗಿ ಮಾತನಾಡುವ ಪ್ರತಾಪಸಿಂಹ  ಜಲದರ್ಶಿನಿ ಅತಿಥಿಗೃಹದಲ್ಲಿ ಫ್ಲೆಕ್ಸ್ ಗಳನ್ನು ಅನಾವರಣಗೊಳಿಸಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದು ಅವರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯ ವ್ಯಕ್ತಿತ್ವವನ್ನು ತೋರಿಸುತ್ತದೆ. ಇದಕ್ಕಾಗಿ ತಮಗೆ ಮತ ಹಾಕಿದ ಜನತೆಯ ಕ್ಷಮೆ ಕೇಳಬೇಕು ಎಂದು ಹೆಚ್.ಎ ವೆಂಕಟೇಶ್ ಆಗ್ರಹಿಸಿದರು.

ಮೈಸೂರಿನ ಪಾರಂಪರಿಕ ಅತಿಥಿ ಗೃಹಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗ ಬೇಕಾಗಿದೆ. ಈ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮಧ್ಯಪ್ರವೇಶಿಸಿ ರಾಜಕಾರಣಿಗಳಿಗೆ ನೀಡಿರುವ ಅತಿಥಿ ಗೃಹಗಳನ್ನು ಹಿಂಪಡೆಯಬೇಕು ಎಂದು  ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್ ಆಗ್ರಹಿಸಿದ್ದಾರೆ.

Key words: MP Prathap simha- Birthday -Celebration –Guesthous- KPCC -spokesman –HA Venkatesh