ಐಟಿ, ಬಿಟಿ ಕ್ಷೇತ್ರಗಳಲ್ಲಿ ರಾಜ್ಯದ ನೆರವು ಕೋರಿದ ಮೊರಾಕ್ಕೊ..

ಬೆಂಗಳೂರು,ಜೂನ್,1,2022(www.justkannada.in): ಅಭಿವೃದ್ಧಿಶೀಲ ದೇಶವಾಗಿರುವ ಮೊರಾಕ್ಕೊಗೆ ರಾಜ್ಯವು ಐಟಿ, ಬಿಟಿ, ನವೋದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಪೂರೈಕೆಗಳಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯNf ಬುಧವಾರ ಭರವಸೆ ನೀಡಿದರು.

ಮೊರಾಕ್ಕೊದ ಡಿಜಿಟಲ್ ವ್ಯವಹಾರಗಳು ಮತ್ತು ಆಡಳಿತ ಸುಧಾರಣೆ ಸಚಿವೆ ಘಿಟಾ ಮೆಜೌರ್ ನೇತೃತ್ವದ ನಿಯೋಗದ ಜತೆ ಇಲ್ಲಿ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದಲ್ಲಿರುವ ಐಟಿ, ಬಿಟಿ, ಸ್ಟಾರ್ಟಪ್ ವಲಯಗಳ ಕಾರ್ಯ ಪರಿಸರ ಮತ್ತು ಸರಕಾರವು ಇವುಗಳಿಗೆ ನೀಡುತ್ತಿರುವ ರಿಯಾಯಿತಿ, ಸೌಲಭ್ಯಗಳು ಮತ್ತು ಉತ್ತೇಜನಾ ಉಪಕ್ರಮಗಳನ್ನು ವಿವರಿಸಿದರು.

ಅಲ್ಲದೆ, ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ಸಕ್ರಿಯರಾಗಿರುವ ಈ ಕ್ಷೇತ್ರಗಳ ಪರಿಣತರು ಮತ್ತು ಉದ್ಯಮಿಗಳೊಂದಿಗೆ ಮೊರಾಕ್ಕೊ ನಿಯೋಗದ ಭೇಟಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಮೊರಾಕ್ಕೊದ ತಂಡವು ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಇರಲಿದೆ.

ಕರ್ನಾಟಕವು ನವೋದ್ಯಮಗಳಾದ ಎಡುಟೆಕ್, ಅಗ್ರಿಟೆಕ್, ಫಿನ್‌ ಟೆಕ್‌ ಇತ್ಯಾದಿಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಪರಿಣಿತಿಯ ಲಾಭವನ್ನು ಪಡೆದುಕೊಳ್ಳುವುದು ತಮ್ಮ ಉದ್ದೇಶವಾಗಿದೆ ಎಂದು ಮೊರಾಕ್ಕೊ ನಿಯೋಗದ ಪರವಾಗಿ ಘಿಟ್ಟಾ ಅವರು ಮನದಟ್ಟು ಮಾಡಿಕೊಟ್ಟರು.

ಅಲ್ಲದೆ, ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡಿರುವ ಕರ್ನಾಟಕವು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗಳಲ್ಲಿ ಅನನ್ಯ ಸಾಧನೆ ಮಾಡಿರುವುದು ತಮಗೆ ತಿಳಿದಿದೆ. ಹೀಗಾಗಿಯೇ ಸಹಕಾರ ವರ್ಧನೆಯನ್ನು ಅರಸಿಕೊಂಡು ಬೆಂಗಳೂರಿಗೆ ಬಂದಿದ್ದೇವೆ. ಇದರಿಂದ ಮೊರಾಕ್ಕೊದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದು ಎನ್ನುವುದು ತಮ್ಮ ನಿರೀಕ್ಷೆಯಾಗಿದೆ ಎಂದು ಅವರು ವಿವರಿಸಿದರು.

ಇದಕ್ಕೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವತ್ ನಾರಾಯಣ್, `ರಾಜ್ಯವು ಈ ಎಲ್ಲ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ರಾಜ್ಯವು ಈಗಾಗಲೇ ಹಲವು ದೇಶಗಳೊಂದಿಗೆ ಸಹಕಾರ ಒಡಂಬಡಿಕೆ ಮಾಡಿಕೊಂಡಿದ್ದು, ಸಹಾಯಹಸ್ತ ಚಾಚಿದೆ. ಮೊರಾಕ್ಕೊಗೆ ಕೂಡ ಮುಂಬರುವ ದಿನಗಳಲ್ಲಿ ನೆರವು ನೀಡಲಾಗುವುದು’ ಎಂದು ನಿಯೋಗಕ್ಕೆ ಹೇಳಿದರು.

ಸಚಿವರು ಇದೇ ಸಂದರ್ಭದಲ್ಲಿ ಮೊರೊಕ್ಕೊ ನಿಯೋಗಕ್ಕೆ ಬೆಂಗಳೂರು ಟೆಕ್ ಸಮಿಟ್ ನಲ್ಲಿ ಭಾಗವಹಿಸುವಂತೆ ಆಹ್ವಾನ‌ ನೀಡಿದರು.

ಮಾತುಕತೆಯಲ್ಲಿ ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಮೊರಾಕ್ಕೊ ನಿಯೋಗದಲ್ಲಿ ಭಾರತೀಯ ರಾಯಭಾರಿ ಮೊಹಮದ್ ಮಾಲಿಕಿ, ಸಚಿವರ ತಂಡದ ಮುಖ್ಯಸ್ಥೆ ಸಲ್ಮಾ ಬೌರಿಮೆಚ್ ಮುಂತಾದವರಿದ್ದರು.

Key words: Morocco – seeking -state -assistance – IT and BT- sectors-minister-Ashwath narayan