ಮೋದಿಯವರು ಮಕ್ಕಳು ಮಾಡದಿದ್ರೆ ನಮ್ಮ ತಪ್ಪಾ?! ಜೆಡಿಎಸ್ ರಾಜ್ಯಾಧ್ಯಕ್ಷರ ಮಾತಿನ ಭರಾಟೆ

ಬೆಂಗಳೂರು, ಜೂನ್ 05, 2022 (www.justkannada.in): ಕುಟುಂಬ ರಾಜಕಾರಣ ಅಗತ್ಯವಾಗಿ ಬೇಕು, ಅದನ್ನು ಕಾಂಗ್ರೆಸ್ಸೂ ಮಾಡ್ತಿದೆ, ಜೆಡಿಎಸ್ಸೂ ಮಾಡ್ತಿದೆ. ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಆಗುವುದಿಲ್ಲ.ಮೋದಿಯವರು ಮಕ್ಕಳು ಮಾಡದಿದ್ರೆ ನಮ್ಮ ತಪ್ಪಾ ಎಂದು ಭರದಲ್ಲಿ ಪ್ರಧಾನಿಗಳ ವಿರುದ್ಧ ಮಾತನಾಡಿದ್ದಾರೆ.

ಕುಟುಂಬ ರಾಜಕಾರಣದಿಂದ ಪರಸ್ಪರ ಹಿರಿಯರಿಗೆ ಗೌರವ ಸಿಗುತ್ತದೆ. ಬಿಜೆಪಿ ಅವರಿಗೆ ಮೋದಿ ಅಭಿಮಾನವಿದ್ದರೆ ನಮಗೆ ದೇವೇಗೌಡ ಅಭಿಮಾನ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು. ಇಂದಿರಾಗಾಂಧಿ ನಂತರ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಾವು ರೈತರ ಮಕ್ಕಳು, ರೈತರಂತೆ ಇದ್ದೇವೆ. ರೈತರು ಮಾರೋ ಕಾಳು ಬೇರೆ, ಬಿತ್ತನೆ ಬೀಜ ಬೇರೆ. ದೇವೇಗೌಡರು ಬಿತ್ತನೆ ಕಾಳು ಇದ್ದಂತೆ. ಮೋದಿ ಅವರಿಗೆ ಮಕ್ಕಳಿರದಿದ್ದರೆ ನಮ್ಮ ತಪ್ಪಾ? ಅವರಿಗೆ ಕುಟುಂಬ ಇಲ್ಲ. ನಮಗೆ ಇದೆ. ನಮ್ಮವರು ರಾಜಕೀಯಕ್ಕೆ ಬರುತ್ತಾರೆ, ತಪ್ಪೇನಿದೆ ಎಂದಿದ್ದಾರೆ.