ಡಿಕೆಶಿ ವಿರುದ್ಧ ಗರಂ: ಹತ್ಯೆಗೆ ಸ್ಕೆಚ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಶಾಸಕ ಎಸ್.ಆರ್ ವಿಶ್ವನಾಥ್

ಬೆಂಗಳೂರು,ಡಿಸೆಂಬರ್,1,2021(www.justkannada.in):  ತನ್ನ ಹತ್ಯೆಗೆ ಕಾಂಗ್ರೆಸ್ ಪರಾಜಿತ್ ಅಭ್ಯರ್ಥಿ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ಸ್ಕೇಚ್ ಹಾಕಿದ್ದ ವಿಡಿಯೋ ಬಹಿರಂಗವಾದ ಹಿನ್ನೆಲೆ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಶಾಸಕ ಎಸ್.ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ.

ಈ ಕುರಿತು ದೂರು ನೀಡಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್, ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು. ತಾವು ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಪತ್ರ ಬಂದಿತ್ತು. ನನ್ನ ಹತ್ಯೆಗೆ ಪ್ಲ್ಯಾನ್ ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ. ರಾಜಾನುಕುಂಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಯೂ ನಾನು ಮಾತಾಡಿದ್ದೇನೆ ಎಂದರು.

ಇಡೀ ಸಂಭಾಷಣೆ ನನ್ನ ಮೇಲೆ ದ್ವೇಷ ಕಾರುವಂತೆ ಇದೆ. ಆಂಧ್ರದಿಂದ ಸುಪಾರಿ ಕಿಲ್ಲರ್ಸ್‌ ಕರೆಸುವುದಾಗಿ ಚರ್ಚಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ನನ್ನ ಜೊತೆಗೆ ಇದ್ದವರು. ಅವರನ್ನು ಎಪಿಎಂಸಿ ಅಧ್ಯಕ್ಷನಾಗಿ ಮಾಡಿದ್ದು ನಾನೇ. ಕಡಬಗೆರೆ ಶ್ರೀನಿವಾಸ್ ಮೇಲೆ ಶೂಟೌಟ್ ಆಗಿತ್ತು. ನನ್ನ ಏರಿಯಾದಲ್ಲಿ ಶೂಟೌಟ್ ನಡೆದಿತ್ತು. ಈ ಬಗ್ಗೆ ತನಿಖೆ ಮಾಡುವಂತೆ ನಾನು ಕೂಡ ಒತ್ತಾಯಿಸಿದ್ದೆ. ಆದರೆ ಈವರೆಗೆ ಇದರ ಹಿಂದೆ ಯಾರಿದ್ದಾರೆಂದು ಗೊತ್ತಿಲ್ಲ.

ಕೊಲೆಗೆ ಎಷ್ಟು ದಿನದಿಂದ ಸ್ಕೆಚ್ ಹಾಕಿದ್ದರೆಂದು ಗೊತ್ತಿಲ್ಲ. ನಿನ್ನೆ ಸಂಜೆ 7.30ರ ಸುಮಾರಿಗೆ ಪತ್ರದ ಬಗ್ಗೆ ಮಾಹಿತಿ ಇತ್ತು. ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು. ನಾನು ಮೊದಲೇ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ವಿಡಿಯೋ ಇರಲಿಲ್ಲ, ಗೊತ್ತಾದ ಕೂಡಲೇ ಹೇಳಿದ್ದೇನೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಅವರಿಗೆ ಹೇಳಿದ್ದೆ. ಗೃಹ ಸಚಿವರಿಗೆ ಹೇಳಿದ ತಕ್ಷಣ ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನನಗೆ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಕೇಳಿದ್ದೇನೆ. ಪೊಲೀಸ್ ರಕ್ಷಣೆ ಬೇಕೆಂದು 4 ಬಾರಿ ಪತ್ರ ಬರೆದಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿಯೂ ನನ್ನ ವಿರುದ್ಧ ಪ್ರಕರಣ ದಾಖಲು ಆಗಿತ್ತು. ಅವರು ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಿದ್ದರು. ಆದರೂ ನಾನು ಎಂದು ಕ್ಷೇತ್ರವನ್ನು ಬಿಟ್ಟು ಹೋಗಿರಲಿಲ್ಲ. ಎಲ್ಲ ಆರೋಪಗಳನ್ನು ಕ್ಷೇತ್ರದಲ್ಲೇ ಇದ್ದು ಎದುರಿಸಿದ್ದೇನೆ. ಯಾರೋ ಪ್ರಭಾವ ಬೀರಿ ಗೋಪಾಲಕೃಷ್ಣನನ್ನ ಬಿಡಿಸಿದ್ದಾರೆ. ಪ್ರಭಾವಿಗಳು ಯಾರೆಂದು ಹೇಳುವುದಕ್ಕೆ ಹೋಗುವುದಿಲ್ಲ. ಮೊದಲು ತನಿಖೆಯಾಗಲಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್  ಆಗ್ರಹಿಸಿದರು.

 ಡಿಕೆ ಶಿವಕುಮಾರ್ ವಿರುದ್ಧ ಗರಂ.

ರೌಡಿಗಳು ಎಸ್‌ ಆರ್ ವಿಶ್ವನಾಥ್ ಜೊತೆಗೆ ಇದ್ದಾರೆ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ವಿರುದ್ಧ ಕಿಡಿಕಾರಿದ ಶಾಸಕ ಎಸ್.ಆರ್ ವಿಶ್ವನಾಥ್, ಡಿ.ಕೆ ಶಿವಕುಮಾರ್ ಏನು ಸಾಧು ಸಂತರ ಜತೆ ಓಡಾಡುತ್ತಿದ್ದಾರಾ..? ಗೋಪಾಲಕೃಷ್ಣ ಅಂತವರನ್ನ ಡಿಕೆ ಶಿವಕುಮಾರ್ ಸಮರ್ಥನೆ ಮಾಡಿಕೊಳ್ಳಬಾರದು ಎಂದು ಕಿಡಿಕಾರಿದರು.

ಹಾಗೆಯೇ ವಿಪಕ್ಷ ನಾಯಕರು ಕೂಡ ಸಮರ್ಥನೆ ಮಾಡಿಕೊಳ್ಳುವುದು ಬೇಡ. ಅವರು ತನಿಖೆಗೆ ಆಗ್ರಹಿಸಲಿ ಎಂದು ಎಸ್.ಆರ್ ವಿಶ್ವನಾಥ್ ಹೇಳಿದರು.

Key words: MLA- SR Viswanath- demanded – high-level- probe – sketch – murder