ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಆಶ್ರಯ ಮನೆಗಳ ವಿತರಣೆಗೆ ಶಾಸಕ ರಾಮದಾಸ್ ಅಡ್ಡಿ- ಎಂ.ಕೆ. ಸೋಮಶೇಖರ್ ಆರೋಪ…

ಮೈಸೂರು,ಫೆ,6,2020(www.justkannada.in):  ನಾನು ಶಾಸಕನಾಗಿದ್ದ ಅವಧಿಯಲ್ಲಿ ಸತತ ನಾಲ್ಕು ವರ್ಷ ಹೋರಾಟ ಮಾಡಿ 5,296 ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿದ್ದೆ. ಆದರೆ ಹಾಲಿ ಶಾಸಕ ಎಸ್.ಎ ರಾಮದಾಸ್ ಅವರು ಆಶ್ರಯ ಮನೆಗಳ ವಿತರಣೆ ಮಾಡದಂತೆ ತಡೆಯೊಡ್ಡಿದ್ದಾre.  ಸ್ವತಃ ಮೈಸೂರು ಜಿಲ್ಲಾಧಿಕಾರಿ ಅವರೇ ಈ ವಿಚಾರವನ್ನು ನನಗೆ ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಆರೋಪಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ   ಮಾತನಾಡಿದ ಮಾಜಿ ಶಾಸಕ ಎಂ.ಕೆ ಸೋಮಶೇಖರ್, ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಳಲವಾಡಿಯಲ್ಲಿ 1,344 ಮನೆಗಳು, ವಿಶ್ವೇಶ್ವರನಗರದಲ್ಲಿ 868, ಲಲಿತಾದ್ರಿಪುರದಲ್ಲಿ 1,440 ಮತ್ತು ಗೊರೂರಿನಲ್ಲಿ 1,644 ಮನೆಗಳು ಸೇರಿದಂತೆ ಒಟ್ಟು 5,296 ಮನೆಗಳಿಗೆ ಮಂಜೂರಾತಿ ದೊರೆತಿದೆ. ಈ ಬಗ್ಗೆ ಫಲಾನುಭವಿಗಳಿಗೆ ನಗರಪಾಲಿಕೆಯಿಂದ ಮಾಹಿತಿ ಸಹ ನೀಡಲಾಗಿತ್ತು. ಆದರೆ ಆ ನಂತರ ಶಾಸಕರಾಗಿ ಆಯ್ಕೆಯಾದ ರಾಮದಾಸ್ ಅವರು 5,296 ಆಶ್ರಯ ಮನೆಗಳ ವಿತರಣೆ ಮಾಡದಂತೆ ತಡೆಯೊಡ್ಡಿದ್ದಾರೆ. ರಾಮದಾಸ್ ಅಡ್ಡಿಪಡಿಸಿರುವ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಅವರು ನನಗೆ ಹೇಳಿದ್ದಾರೆ ಎಂದರು.

ಈ ಮೂಲಕ ಶಾಸಕ ರಾಮದಾಸ್ ಕ್ರೂರತ್ವದಿಂದ ನಡೆದುಕೊಂಡಿದ್ದಾರೆ. ರಾಮದಾಸ್ ರ ಜನವಿರೋಧಿ ಬಡವರ ವಿರೋಧಿ ನಿಲುವು ಖಂಡಿಸಿ ನಾಳೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮೌನ ಪ್ರತಿಭಟನೆ ಮಾಡುತ್ತೇನೆ. ನಾಳೆ ನನ್ನ ಹುಟ್ಟು ಹಬ್ಬವಾಗಿದೆ. ಪ್ರತಿವರ್ಷ ನನ್ನ ಹುಟ್ಟುಹಬ್ಬದ ದಿನದಂದು ಹಲವು ಜನಪರ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ನಾಳೆ ಕೂಡ ಬಡ ಜನರಿಗೋಸ್ಕರ ಮೌನ ಪ್ರತಿಭಟನೆ ಮಾಡುತ್ತೇನೆ ಎಂದು ಎಂ.ಕೆ ಸೋಮಶೇಖರ್ ತಿಳಿಸಿದರು.

ನಾಳಿನ ಪ್ರತಿಭಟನೆಯಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆಂದು ಎಂ.ಕೆ. ಸೋಮಶೇಖರ್ ಹೇಳಿದರು.

Key words: MLA- Ramdas – distribution –houses- granted –MK Somashekhar