ಮಾರ್ಚ್ ಒಳಗೆ ಹಾಕಿಕೊಂಡ ಗುರಿಮುಟ್ಟಿ; ಬೆಂಗಳೂರು ಡಿಸಿಸಿ ಬ್ಯಾಂಕ್ ಗೆ ಸಚಿವ ಎಸ್.ಟಿ ಸೋಮಶೇಖರ್  ಸೂಚನೆ

ಬೆಂಗಳೂರು,ಜನವರಿ,21,2021(www.justkannada.in):  ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಹೊಸಕೋಟೆ ಹಾಗೂ ದೇವನಹಳ್ಳಿ ಶಾಖೆಗಳಿಗೆ ಭೇಟಿ ನೀಡಿದ ಸಹಕಾರ ಸಚಿವರಾದ ಎಸ್‌.ಟಿ.ಸೋಮಶೇಖರ್ ಅವರು, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು.minister-st-somasekhars-visit-instruct-dcc-bank-bangalore

ಡಿಸಿಸಿ ಬ್ಯಾಂಕ್ ಮುಖಾಂತರ ಯಾವ ಯಾವ ಸಾಲಗಳನ್ನು ನೀಡಲಾಗುತ್ತಿದೆ? ಬಡವರ ಬಂಧು, ಕಾಯಕ, ಎಸ್ಸಿಎಸ್ಟಿ ಯೋಜನೆಯಡಿ ಸಾಲ ನೀಡಿಕೆ ಹಾಗೂ ಮರುಪಾವತಿ ಬಗ್ಗೆ  ಸಚಿವ ಎಸ್ ಟಿ ಸೋಮೇಖರ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮಾರ್ಚ್ ಒಳಗೆ ಗುರಿಮುಟ್ಟಿ; ಬೆಂಗಳೂರು ಡಿಸಿಸಿ ಬ್ಯಾಂಕ್ ಗೆ ಸೂಚನೆ

ಬೆಂಗಳೂರಿನ ಚಾಮರಾಜನಗರದಲ್ಲಿರುವ ಡಿಸಿಸಿ ಬ್ಯಾಂಕ್ ಒಟ್ಟಾರೆಯಾಗಿ ವಿತರಣೆ ಮಾಡಿರುವ ಸಾಲ, ಮರುಪಾವತಿ ಹಾಗೂ ಹಾಕಿಕೊಂಡಿರುವ ಗುರಿಗಳ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ ಅಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮಂದಿಗೆ 550 ಕೋಟಿ ರೂಪಾಯಿ ಸಾಲ ನೀಡಬೇಕೆಂಬ ಗುರಿ ಹೊಂದಲಾಗಿತ್ತು. ಈವರೆಗೆ 80060 ರೈತರಿಗೆ  421 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಾಕಿಕೊಂಡ ಗುರಿಮುಟ್ಟಿ

ಇದೇ ಮಾರ್ಚ್ ಒಳಗೆ ಹಾಕಿಕೊಂಡ ಗುರಿ ಮುಟ್ಟುವ ಮೂಲಕ ಶೇ. 100ರಷ್ಟು ಸಾಲ ವಿತರಣೆಯಾಗಬೇಕು ಎಂದು ಸೂಚನೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಬ್ಯಾಂಕ್ ಗಳ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಕೋಟೆ ಡಿಸಿಸಿ ಬ್ಯಾಂಕ್ ಉತ್ತಮ ಗುರಿಯನ್ನು ಮುಟ್ಟಿದೆ. ಇದೇ ರೀತಿಯಾಗಿ ಮುಂದೆಯೂ ಕೆಲಸ ಮಾಡಲಿ ಎಂದು ಕಿವಿಮಾತು ಹೇಳಿದರು.

ಹೊಸಕೋಟೆ ಡಿಸಿಸಿ ಬ್ಯಾಂಕ್ ಗಳ ಸಾಲದ ವಿವರ

ಕೆಸಿಸಿ ಬೆಳೆ ಸಾಲ, ಮಧ್ಯಮಾವಧಿ ಸಾಲ (ಕುರಿ, ಕೋಳಿ, ಹಸು ಸಾಕಾಣಿಕೆ), ಚಿನ್ನಾಭರಣ ಸಾಲ, ವೇತನಾಧಾರ ಸಾಲ, ವಾಹನ ಸಾಲ, ಗೃಹ ಸಾಲ, ನಗದು ಸಾಲ, ನೇಕಾರಿಕೆ ಸಾಲ, ಸ್ತ್ರೀ ಸ್ವಸಹಾಯ ಸಂಘಗಳ ಸಾಲ, ಕೆಸಿಸಿ ಡೈರಿ ಸಾಲಗಳನ್ನು ನೀಡಲಾಗುತ್ತಿದ್ದು, ಹೊಸಕೋಟೆ ಶಾಖೆಯಲ್ಲಿ ಇದುವರೆಗೆ ನೀಡಿರುವ ಕೃಷಿ ಮತ್ತು ಕೃಷಿಯೇತರ ಸಾಲಗಳ ಮೊತ್ತ 34.60 ಕೋಟಿ ರೂಪಾಯಿಗಳಾಗಿವೆ ಎಂದು ಅಧಿಕಾರಿಗಳು ಸಚಿವರಾದ ಸೋಮಶೇಖರ್ ಅವರಿಗೆ ಮಾಹಿತಿ ನೀಡಿದರು.

ಇನ್ನು ಮಧ್ಯಮಾವಧಿ ಸಾಲದಡಿ ಹೈನುಗಾರಿಕೆಗೆ, ಕೋಳಿ ಸಾಕಾಣಿಕೆಗೆ, ಕುರಿ ಸಾಕಾಣಿಕೆಗೆ ಹಾಗೂ ನೇಕಾರಿಕೆಗೆ ಸಾಲ ನೀಡಲು ಹೆಚ್ಚಿನ ಆದ್ಯತೆ ಕೊಡಿ ಎಂದು ಸಚಿವ ಎಸ್.ಟಿ ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಯಾವ ವಿಭಾಗದಲ್ಲಿ ಸಾಲ ಮರುಪಾವತಿ ಅಷ್ಟಾಗಿ ಆಗುತ್ತಿಲ್ಲ ಎಂದು ಪ್ರಶ್ನಿಸಿದಾಗ, ವೇತನಾಧಾರಿತ ಸಾಲ ಮರುಪಾವತಿ ಸ್ವಲ್ಪ ವಿಳಂಬವಾಗುತ್ತಿದ್ದು, ಎಲ್ಲ ಶಾಖೆಗಳಿಂದ ಶೇ. 52ರಷ್ಟು ವಸೂಲಾತಿಯಾಗಿದೆ. ಇದಕ್ಕೆ ಹೆಚ್ಚಿನ ಪ್ರಯತ್ನ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಬ್ಯಾಂಕ್ ನಗರ ಹಾಗೂ ಗ್ರಾಮಾಂತರ ಬಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಹನುಮಂತಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೃಷ್ಣಮೂರ್ತಿ, ಪಟ್ಟಾಭಿರಾಮಯ್ಯ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.minister-st-somasekhars-visit-instruct-dcc-bank-bangalore

ಟೌನ್ ಕೋ ಆಪರೇಟಿವ್ ಬ್ಯಾಂಕ್ ಗೆ ಭೇಟಿ

ಹೊಸಕೋಟೆ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಿದ ಸಹಕಾರ ಸಚಿವರು, ಬ್ಯಾಂಕ್ ವ್ಯವಹಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಹೊಸಕೋಟೆ ಡಿಸಿಸಿ ಬ್ಯಾಂಕ್ ನಿಂದ ಉತ್ತಮ ಕಾರ್ಯನಿರ್ವಹಣೆ; ಸಚಿವರ ಮೆಚ್ಚುಗೆ

ಸಹಕಾರ ಇಲಾಖೆಯಿಂದ ಸುಮಾರು 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಬೆಳೆ ಸಾಲ ನೀಡಬೇಕೆಂಬ ಗುರಿ ಹಾಕಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಬಾಕಿ ಎಷ್ಟಿದೆ ಎಂದು ಖುದ್ದುಪರಿಶೀಲನೆಗೆ ಇಳಿದಿರುವುದಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಸಚಿವ ಎಸ್.ಟಿ ಸೋಮಶೇಖರ್, ಈಗಾಗಲೇ 19.50 ಲಕ್ಷ ರೈತರಿಗೆ 12.50 ಸಾವಿರ ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಲಾಗಿದೆ. ಯಾವ ಯಾವ ವಿಭಾಗದಲ್ಲಿ ಬಾಕಿ ಇದೆ? ಯಾವ ಸಾಲ ನೀಡಿಕೆಯಲ್ಲಿ ಹಿನ್ನಡೆಯಾಗಿದೆ? ಎಂಬ ಬಗ್ಗೆ ಮಾಹಿತಿ ಕಲೆಹಾಕಿ, ಶೀಘ್ರದಲ್ಲಿ ಗುರಿ ಮುಟ್ಟುವಂತೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಹೊಸಕೋಟೆ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ನೂರಕ್ಕೆ ನೂರರಷ್ಟು ಮರುಪಾವತಿಯಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

ಸಹಕಾರ ರಂಗದಲ್ಲಿ ಉತ್ತಮ ತಂಡ; ಸಚಿವರ ಶ್ಲಾಘನೆ

ಪಕ್ಷಭೇದ ಮರೆತು ತಂಡವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿ ಯಾವುದೇ ಪಕ್ಷ ಭೇದ ಇರುವುದಿಲ್ಲ. ಇದೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನವರು ಆಯ್ಕೆಯಾಗಿದ್ದರೂ ಒಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದೇ ರೀತಿ ತಂಡ ಮುಂದುವರಿದರೆ ಸಹಕಾರ ಇಲಾಖೆ ಶೇಕಡಾ 100ರಷ್ಟು ಸಾಧನೆ ಮಾಡಲಿದೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ಹೈನುಗಾರಿಕೆಗೆ 2 ಲಕ್ಷ ರೂಪಾಯಿ ಸಾಲವನ್ನು ಆತ್ಮನಿರ್ಭರ ಅಡಿ ನೀಡಲಾಗುತ್ತಿದೆ. ರೈತರಿಗೆ ಯಾವುದೇ ರೀತಿಯಲ್ಲಿ ರಸಗೊಬ್ಬರಕ್ಕೆ ತೊಂದರೆಯಾಗುತ್ತಿಲ್ಲ. ಎಲ್ಲವನ್ನೂ ಸರಾಗವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ರಸಗೊಬ್ಬರ ಗೋದಾಮು ಪರಿಶೀಲನೆ

ಹೊಸಕೋಟೆ ಟಿಎಪಿಸಿಎಂಎಸ್ ಶಾಖೆಗೆ ಭೇಟಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್ ,ಕಾರ್ಯವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಇದೇ ವೇಳೆ ಶಾಖೆಯ ರಸಗೊಬ್ಬರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Key words: minister-  ST Somasekhar’s –visit-instruct – DCC Bank-Bangalore