ಬೆಳ್ಳಂಬೆಳಗ್ಗೆ ಮೈಸೂರು ಎಪಿಎಂಸಿ ರೌಂಡ್ ಹಾಕಿದ ನೂತನ‌ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್

ಮೈಸೂರು, ಏಪ್ರಿಲ್ 11, 2020 (www.justkannada.in): ಶನಿವಾರ ಮುಂಜಾನೆಯೇ ನಗರ ಪ್ರದಕ್ಷಿಣೆ ಹಾಕಿದ ಮಾನ್ಯ ಜಿಲ್ಲಾ ಉಸ್ತುವಾರಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಎಪಿಎಂಸಿಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಅಹವಾಲು ಆಲಿಸಿದರು.

ಇದೇ ವೇಳೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್, ಎಸ್ ಪಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಸೇರಿ ಇನ್ನಿತರ ಎಪಿಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊರೋನಾ ಸೋಂಕು ನಿವಾರಕ ಟನಲ್ ನಲ್ಲೆ ಸ್ವತಃ ಸಚಿವರೇ ಆಗಮಿಸಿ ಉದ್ಘಾಟನೆ ಮಾಡುವ ಮೂಲಕ ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂಬ ಸಂದೇಶ ಸಾರಿದರು.

ಎಪಿಎಂಸಿಗೆ ಭೇಟಿ ನೀಡಿದ ಮಾನ್ಯ ಸಚಿವರು, ಕೈಗೊಳ್ಳಲಾದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಳಿಕ ವರ್ತಕರಿಂದಲೇ ಕೈಗೊಳ್ಳಲಾಗಿರುವ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂದು ಖುದ್ದು ತಿಳಿದುಕೊಂಡರು. ಎಲ್ಲ ಸಮಸ್ಯೆಗಳಿಗೂ ತಕ್ಷಣವೇ ಸ್ಪಂದನೆ ಸಿಗಲಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ಮಾಡಿದರು.

ಇದೇ ವೇಳೆ, ಮಾರ್ಕೆಟ್ ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡಿದರು. ರೈತರು ಹಾಗೂ ವರ್ತಕರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಸಹಕಾರ ಹಾಗೂ ಸಹಾಯಕ್ಕೆ ಸರ್ಕಾರ ಯಾವಾಗಲೂ ಬದ್ಧವಿದೆ. ನಿಮ್ಮ ಸ್ಪಂದನೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುವ ವೇಳೆ ಚೆಕ್ ಪೋಸ್ಟ್ ಸೇರಿದಂತೆ ಎಲ್ಲೂ ಯಾವುದೇ ತೊಂದರೆಯಾಗಿಲ್ಲವೇ? ಸೂಕ್ತ ಬೆಲೆ ಸಿಗುತ್ತಿದೆಯೇ ಎಂದು ಪ್ರಶ್ನಿಸಿದ ಮಾನ್ಯ ಸಚಿವರು, ಸಮಸ್ಯೆ ಇದ್ದರೆ ತಕ್ಷಣ ಗಮನಕ್ಕೆ ತರುವಂತೆ ಸೂಚಿಸಿದರು.

ಶೀಘ್ರ ಕೋಲ್ಡ್ ಸ್ಟೋರೇಜ್: ಎಲ್ಲ ಎಪಿಎಂಸಿ ಗೆ ಭೇಟಿ ನೀಡಿದಂತೆ ಇಲ್ಲೂ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಸಮಸ್ಯೆಗಳ ಪರಿಹಾರವೇ ನನ್ನ ಮೊದಲ ಆದ್ಯತೆ. ಪೊಲೀಸರಿಂದ ಸೇರಿ ಯಾರಿಂದಲೂ ಸಮಸ್ಯೆ ಆಗಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶ ಸಹ. ಹೀಗಾಗಿ ಖುದ್ದು ನಾನೇ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದೇನೆ ಎಂದು ಮಾನ್ಯ ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಸಿಸ್ಟಮ್ ಅಳವಡಿಸಬೇಕಿದೆ.
ಆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ‌ ಕೈಗೊಳ್ಳುತ್ತೇನೆ. ಕೋಲ್ಡ್ ಸ್ಟೋರೆಜ್ ಇದ್ದರೆ ತರಕಾರಿ ಇಟ್ಟು ಮಾರಲು ರೈತರಿಗೆ ಅನುಕೂಲ ಆಗಲಿದೆ.
ಇದರಿಂದ ತರಕಾರಿ ಕೊಳೆಯುವಿಕೆಗೆ ಬ್ರೇಕ್ ಬೀಳಲಿದೆ ಎಂದು ಸಚಿವರು ತಿಳಿಸಿದರು.

ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ತರಕಾರಿ ನಾಶಪಡಿಸುತ್ತಿರುವ ವಿಚಾರ
ಅದನ್ನು ಸರ್ಕಾರದಿಂದಲೇ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಕೆಲವೆಡೆ ಈಗಾಗಲೇ ಆ ಕೆಲಸ‌ ಆಗುತ್ತಿದೆ.
ರೈತರಿಂದ ಪಡೆದು ಹಾಪ್ ಕಾಮ್ಸ್ ಮೂಲಕ ಮಾರಾಟದ ಬಗ್ಗೆ ಚಿಂತನೆ ಇದೆ. ಜನಪ್ರತಿನಿಧಿಗಳು ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮ‌ ಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು.