ಅವರ ಊರಿಗೆ ಅವ್ರು ಬಂದ್ರೆ ಬೇಡ ಅನ್ನೋಕೆ ಆಗುತ್ತಾ?: ಮಂಡ್ಯ ಜಿಲ್ಲೆ ಜನರಿಗೆ ಆತಂಕ ಬೇಡ ಎಂದ ಸಚಿವ ನಾರಾಯಣಗೌಡ

ಮಂಡ್ಯ, ಮೇ 21, 2020 (www.justkannada.in): ಮುಂಬೈನಿಂದ ಬರುವವರಿಗೆ ಚೆಕ್ ಪೋಸ್ಟ್ ನಲ್ಲಿ ಆರಂಭದಲ್ಲಿ ತಡೆದು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ. ಇನ್ನು 2 ಸಾವಿರ ಜನರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್-19 ತಡೆಯಲು ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

ಚುಂಚನಗಿರಿ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ ಸೇವಾ ಸಿಂಧುವಿನಲ್ಲಿ ಅರ್ಜಿಗಳನ್ನು ಹಾಕಿದವರಿಗೆ ಮುಂಬೈ ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಎರಡು ಸಾವಿರ ಜನಕ್ಕೆ ಕ್ವಾರಂಟೈನ್ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್‍ಗೆ ಹಣದ ಕೊರತೆ ಇಲ್ಲ. ಕೋವಿಡ್-19 ವಿಚಾರದಲ್ಲಿ ಎಲ್ಲರೂ ಒಂದಾಗಿ ಹೋರಾಟ ಮಾಡೋಣ ಎಂದು ಸಚಿವರು ತಿಳಿಸಿದರು.